ಬಾಗಲಕೋಟೆ :ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮದೇ ಆದ ಛಾಪು ಮೂಡಿಸಿರುವ ಪ್ರಕಾಶ ತಪಶೆಟ್ಟಿ ಅವರು, ಈಗ ಕೃಷಿ ಕ್ಷೇತ್ರದಲ್ಲಿ ಮಗ್ನರಾಗಿದ್ದಾರೆ. ಸಹಕಾರಿ ಕ್ಷೇತ್ರಕ್ಕಿಂತ ನೆಮ್ಮದಿ ಸಿಗುವುದು ಕೃಷಿ ಕ್ಷೇತ್ರದಲ್ಲಿ ಎಂಬ ಭಾವನೆಯಿಂದಾಗಿ ಕುರಿ ಸಾಕಾಣಿಕೆ ಕೇಂದ್ರ ತೆರೆದು, ವಿವಿಧ ಬಗೆಯ ತಳಿಗಳನ್ನು ಸಾಕಾಣಿಕೆ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಬಾಗಲಕೋಟೆ ನಗರದ ಸಮೀಪ ಇರುವ ಸೀಗಿಕೇರಿ ಗ್ರಾಮದ ಬಳಿ ಸುಮಾರು 14 ಏಕರೆ ಪ್ರದೇಶದಲ್ಲಿ ಕುರಿ ಸಾಕಾಣಿಕೆ ಕೇಂದ್ರ ಮಾಡುವ ಜೊತೆಗೆ ವಿವಿಧ ಬೆಳೆಗಳನ್ನ ಬೆಳೆದು, ಇತರ ರೈತರಿಗೆ ಮಾದರಿಯಾಗುತ್ತಿದ್ದಾರೆ. ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದ ಶೆಡ್ ನಿರ್ಮಾಣ ಸೇರಿದಂತೆ ವಿವಿಧ ಬಗೆಯ ತಳಿಗಳನ್ನು ತಂದು ಸಾಕಾಣಿಕೆ ಹಾಗೂ ಮಾರಾಟ ಮಾಡುತ್ತಿದ್ದಾರೆ.
ಕುರಿ ಸಾಕಾಣಿಕೆಗೆ 1 ಕೋಟಿ ಬಂಡವಾಳ : ಇತ್ತೀಚಿನ ದಿನಮಾನದಲ್ಲಿ ರೈತರು ಯಾವುದೇ ಶ್ರಮ ಇಲ್ಲದೇ, ಹೆಚ್ಚಿನ ಆದಾಯ ಗಳಿಸುವ ಬಗ್ಗೆ ಚಿಂತನೆ ಮಾಡುತ್ತಾರೆ. ಆದರೆ, ಪ್ರಕಾಶ ತಪಶೆಟ್ಟಿ ಅವರು ಹೆಚ್ಚು ಶ್ರಮ ಹಾಕಿದರೆ, ಲಾಭ ಖಚಿತ ಎಂದು ಹೇಳುತ್ತಾರೆ. 30 ಲಕ್ಷ ರೂ. ವೆಚ್ಚ ಮಾಡಿ ಶೆಡ್ ನಿರ್ಮಾಣ ಮಾಡಲಾಗಿದೆ. ಸುಮಾರು 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುರಿ, ಮೇಕೆ, ಆಡು, ಟಗರಿನ ವಿವಿಧ ತಳಿಗಳನ್ನು ತಮ್ಮ ಶೆಡ್ನಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ.
ಮೇಕೆ ಹಾಲು ಮೇಕೆ ಮರಿಗೆ ಬಳಕೆ : ಇಷ್ಟೇ ಅಲ್ಲ ಆಫ್ರಿಕಾ ದೇಶದ ತಳಿಯನ್ನು ತಂದು ಅಭಿವೃದ್ಧಿಪಡಿಸುತ್ತಿದ್ದಾರೆ. ಮೇಕೆಯಿಂದ ಹಾಲು ತೆಗೆದು ಅವುಗಳ ಮರಿಗೆ ಕುಡಿಸುತ್ತಾರೆ. ಕುರಿಗಳ ಆಹಾರಕ್ಕಾಗಿ ಬೆಲ್ಲ, ಎಣ್ಣೆ, ಕಾಳುಗಳು ಹಾಗೂ ಮೇವು ಸಂಗ್ರಹ ಮಾಡಿದ್ದಾರೆ. ಕೂಲಿ ಕಾರ್ಮಿಕರ ಮೂಲಕ ಎಲ್ಲ ರೀತಿಯಾಗಿ ಕುರಿಗಳ ನಿರ್ವಹಣೆ ಮಾಡುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಕೇವಲ ಎರಡು ಕುರಿಗಳಿಂದ ಇವರು ಕುರಿ ಸಾಕಾಣಿಕೆ ಪ್ರಾರಂಭಿಸಿದ್ದರು. ಈಗ ಕುರಿ ಕೇಂದ್ರದಲ್ಲಿ 450 ಕ್ಕೂ ಅಧಿಕ ಕುರಿಗಳು ಇವೆ. ಇದರಲ್ಲಿ ಸ್ಥಳೀಯ ತಳಿಗಳು ಸೇರಿದಂತೆ ವಿದೇಶ ತಳಿಗಳಾದ ಬೋಯರ್, ಶಿರೂಯಿ, ಢಾರಪರ್ ಸೇರಿದಂತೆ ಇತರ ತಳಿಗಳನ್ನು ಸಹ ತಂದು ಸಾಕಣೆ ಮಾಡಿದ್ದಾರೆ.
ಶೆಡ್ಗೆ ಸಂಶೋಧನಾ ವಿದ್ಯಾರ್ಥಿಗಳು ಭೇಟಿ :ಸುಸಜ್ಜಿತವಾಗಿ ಶೆಡ್ ನಿರ್ಮಾಣ ಮಾಡಿದ್ದು, ಬೇರೆ ಬೇರೆ ತಳಿಗಳಿಗೆ ಬೇರೆ ವಿಭಾಗ ಮಾಡಿ ಅದರಲ್ಲಿ ಇರಿಸಲಾಗುತ್ತಿದೆ. ಅವುಗಳಿಗೆ ಮೇವು ಸೇರಿದಂತೆ ಇತರ ಆಹಾರ, ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಕಾಶ ತಪಶೆಟ್ಟಿ ಅವರು ಈ ರೀತಿಯಾಗಿ ಕುರಿ ಸಾಕಾಣಿಕೆ ಕೇಂದ್ರವನ್ನು ಮಾಡಿರುವ ಬಗ್ಗೆ ಹಾಗೂ ವಿವಿಧ ತಳಿಗಳ ಅಭಿವೃದ್ಧಿ ಬಗ್ಗೆ ವೀಕ್ಷಣೆ ಮಾಡಲು ವಿವಿಧ ಪ್ರದೇಶಗಳಿಂದ ರೈತರು, ಆಸಕ್ತರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಆಗಮಿಸುತ್ತಾರೆ.