ಕರ್ನಾಟಕ

karnataka

ETV Bharat / state

ಮಂಗಳೂರಿನಿಂದ ಅಮೆರಿಕಕ್ಕೆ ಹೋಗುವ ಗಣಪ: 94 ವರ್ಷದಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಒಂದೇ ಕುಟುಂಬ - Ganesha Murti - GANESHA MURTI

ಮಂಗಳೂರಿನ ಕುಟುಂಬವೊಂದು ನಾಲ್ಕು ತಲೆಮಾರಿನಿಂದ ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ತಯಾರಿಸಿಕೊಂಡು ಬಂದಿದ್ದಾರೆ. ಇವರ ಗಣಪತಿಗೆ ಅಮೆರಿಕಾದಲ್ಲೂ ಬೇಡಿಕೆ ಇದೆ.

GANESHA MURTI
ಮಂಗಳೂರಿನಿಂದ ಅಮೆರಿಕಕ್ಕೂ ಹೋಗುತ್ತೆ ಗಣೇಶನ ಮೂರ್ತಿ (ETV Bharat)

By ETV Bharat Karnataka Team

Published : Aug 30, 2024, 7:37 AM IST

ಕಲಾವಿದರ ಮಾತು. (ETV Bharat)

ಮಂಗಳೂರು: ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಲು ಸಿದ್ಧವಾಗಿದೆ. ಗಣೇಶನ ಮೂರ್ತಿಯನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರವಾಗಿದೆ. ಮಂಗಳೂರಿನಲ್ಲಿ ಗಣೇಶನ ಮನೆಯಲ್ಲಿ ಕಲಾವಿದರು ತಯಾರಿಸುವ ಗಣಪತಿ ಅಮೆರಿಕಕ್ಕೂ ಹೋಗುತ್ತೆ ಅನ್ನುವುದು ವಿಶೇಷ.

ಮಂಗಳೂರಿನ ಮಣ್ಣಗುಡ್ಡೆಯ ಗಣೇಶ ಗೃಹಕ್ಕೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಗಣಪತಿ ಮೂರ್ತಿಗಳ ರಾಶಿ ರಾಶಿ. ಸಣ್ಣ ಗಣೇಶ ಮೂರ್ತಿಯಿಂದ ಹಿಡಿದು ಹತ್ತಕ್ಕೂ ಹೆಚ್ಚು ಅಡಿಯ ಗಣಪತಿಗಳು ಇಲ್ಲಿವೆ. ಈ ಬಾರಿ 260 ಗಣಪತಿಗಳನ್ನು ತಯಾರಿಸಲಾಗಿದೆ.

ಸಿದ್ಧಗೊಂಡಿರುವ ಮಣ್ಣಿನ ಗಣಪತಿ ಮೂರ್ತಿಗಳು (ETV Bharat)

ಅಮೆರಿಕಾದ ಕುಟುಂಬವೊಂದು 27 ವರ್ಷಗಳಿಂದ ಗಣೇಶನ ಮೂರ್ತಿಯನ್ನು ಇಲ್ಲಿಂದಲೇ ತಯಾರಿಸಿ ಕೊಂಡೊಯ್ಯುತ್ತಿದೆ. ಕರಾವಳಿ ಮೂಲದಿಂದ ಅಮೆರಿಕಕ್ಕೆ ತೆರಳಿರುವ ವಿನು ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಕುಟುಂಬದವರು ‌ಮಂಗಳೂರಿನಿಂದ ಕ್ಯಾಲಿಫೋರ್ನಿಯಾಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುತ್ತಾರೆ. ಈ ಮೂರ್ತಿ 5 ಕೆಜಿ ಭಾರ ಮತ್ತು 10 ಇಂಚಿನೊಳಗಿನದಾಗಿದೆ. ಪ್ರತಿ ಬಾರಿಯು ಎರಡು ತಿಂಗಳ ಮೊದಲು ಆ ಕುಟುಂಬದವರು ಬಂದು ಗಣೇಶನ ಮೂರ್ತಿ ಇಲ್ಲಿಂದ ಕೊಂಡೊಯ್ದು ಪೂಜೆ ಮಾಡುತ್ತಾರೆ. ಈ ಬಾರಿ ಜುಲೈನಲ್ಲಿ ಇಲ್ಲಿಂದ ಗಣೇಶನ ಮೂರ್ತಿ ಅಮೆರಿಕಾಕ್ಕೆ ಕೊಂಡೊಯ್ದಿದ್ದಾರೆ.

ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆ:ಒಂದೇ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ಮೂರ್ತಿ ತಯಾರಿಸುತ್ತಿದ್ದು ಈ ಬಾರಿಯದ್ದು 95ನೇ ವರ್ಷವಾಗಿದೆ. ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್​ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಇದೀಗ ನಾಲ್ಕನೇ ತಲೆಮಾರು ತೊಡಗಿಸಿಕೊಂಡು ಬಂದಿದೆ. ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರ ಕುಟುಂಬ ವೃತ್ತಿಪರ ಕಲಾವಿದರು ಅಲ್ಲ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಆಗಿದ್ದಾರೆ. ಆದರೆ ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲದಂತೆ ಸುಂದರ ಗಣೇಶನ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ.

ಮೂರ್ತಿ ತಯಾರಿಕೆಯಲ್ಲಿ ಕಲಾವಿದರು. (ETV Bharat)

ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ ದಿವಂಗತ ಮೋಹನ್ ರಾವ್ ಅವರ ಮೂವರು ಪುತ್ರರಾದ ಪ್ರಭಾಕರ ರಾವ್, ಸುಧಾಕರ್ ರಾವ್, ರಾಮಚಂದ್ರ ರಾವ್, ಮೊಮ್ಮಕ್ಕಳಾದ ಬಾಲಕೃಷ್ಣ ರಾವ್, ವೆಂಕಟೇಶ್ ರಾವ್, ಮಹೇಶ್ ರಾವ್, ಪೂನಂ ಮತ್ತು ಪ್ರೀತಮ್ ರಾವ್, ಮರಿ ಮಕ್ಕಳಾದ ಕೃಪ, ಶಿಲ್ಪ, ಅಂಕಿತ್, ಅಂಕುಶ್ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯರು ಮೂರ್ತಿ ತಯಾರಿಯಲ್ಲಿ ತೊಡಗಿಸಿಕೊಂಡರೆ, ಉಳಿದವರು ಮೂರ್ತಿಗೆ ಬಣ್ಣ ಬಳಿಯುವುದು, ಅಲಂಕಾರವನ್ನು ಮಾಡುತ್ತಾರೆ.

ದಿವಂಗತ ಮೋಹನ್ ರಾವ್ ಅವರು ಮುಂಬೈನಲ್ಲಿದ್ದ ವೇಳೆ ಅಲ್ಲಿ ಗಣೇಶ ಮೂರ್ತಿ ತಯಾರಿಕೆಯನ್ನು ನೋಡಿ ಸ್ಫೂರ್ತಿ ಪಡೆದಿದ್ದರು. ಬಳಿಕ ಅವರು ಮಂಗಳೂರಿಗೆ ಬಂದು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಆ ನಂತರ ವರ್ಷಕ್ಕೆ ಬೇಡಿಕೆಯಂತೆ 50 ರಷ್ಟು ಗಣಪತಿ ಮೂರ್ತಿ ತಯಾರಿಸುತ್ತಿದ್ದರು. ಇದೀಗ ಮೋಹನ್ ರಾವ್ ಅವರ ಕುಟುಂಬ ವರ್ಷಕ್ಕೆ 260 ಗಣಪತಿ ಮೂರ್ತಿಯನ್ನು ತಯಾರಿಸುತ್ತದೆ.

ಮೂರ್ತಿ ತಯಾರಿಕೆಯಲ್ಲಿ ಕಲಾವಿದರು. (ETV Bharat)

ಗಣಪನ ತಯಾರಿಕೆಗೆ ಆವೆ ಮಣ್ಣು ಬಳಕೆ;ಇವರು ತಯಾರಿಸುವ ಗಣಪತಿಗೆ ಆವೆ ಮಣ್ಣು ಬಳಸುತ್ತಿದ್ದು, ಸುಮಾರು 16 ಕಡೆಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಇಡುವ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಲಾವಿದ ರಾಮಚಂದ್ರ ರಾವ್ "ನಾವು ಮಾಡಿದ ಗಣೇಶನ ಮೂರ್ತಿಯನ್ನು ಅಮೆರಿಕಾಕ್ಕೆ ಹೋಗುತ್ತದೆ ಎನ್ನುವುದು ವಿಶೇಷ. ಅಲ್ಲಿ ಶೆರ್ಲೆಕಾರ್ ಕುಟುಂಬದವರು, ಕರ್ನಾಟಕದವರು ವಿಜೃಂಭಣೆಯಿಂದ ಗಣೇಶನ ಹಬ್ಬ ಆಚರಿಸುತ್ತಾರೆ. 27 ವರ್ಷಗಳಿಂದ ಅಲ್ಲಿಗೆ ಇಲ್ಲಿಂದಲೇ ಗಣೇಶನ ಮೂರ್ತಿ ಹೋಗುತ್ತಿದೆ. ಅಮೆರಿಕಾಕ್ಕೆ ಕ್ಯಾಬಿನ್​ ಲಗೇಜ್​ನಲ್ಲಿ ತೆಗೆದುಕೊಂಡು ಹೋಗುವುದರಿಂದ ಅವರಿಗೆ 5 ಕೆ.ಜಿ ಮತ್ತು 1 ಫೀಟ್​ನೊಳಗಿನ ಗಣಪತಿ ಬೇಕು. ಅದರಂತೆ ಅವರಿಗೆ ಗಣಪತಿ ಮೂರ್ತಿ ತಯಾರಿಸಲಾಗಿದೆ" ಎಂದು ಹೇಳಿದ್ದಾರೆ.

ಜೂನ್​​ನಿಂದಲೇ ಮೂರ್ತಿ ತಯಾರಿಕೆ ಆರಂಭ:ಈ ಬಗ್ಗೆ ಮಾತನಾಡಿರುವ ಮತ್ತೋರ್ವ ಕಲಾವಿದ ವೆಂಕಟೇಶ್ ರಾವ್ ಅವರು "ಜೂನ್ ತಿಂಗಳಲ್ಲಿ ನಾವು ಗಣೇಶನ ಮೂರ್ತಿ ತಯಾರಿ ಕಾರ್ಯ ಆರಂಭಿಸಿದ್ದೇವೆ. ನಮ್ಮ ಅಜ್ಜ ಮಣ್ಣಗುಡ್ಡೆ ಮೋಹನ್ ರಾವ್​ ಅವರು ಆರಂಭಿಸಿದ ಗಣೇಶನ ಮೂರ್ತಿ ತಯಾರಿ ಕಾರ್ಯ 95 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ಇದೀಗ ನಾಲ್ಕನೇ ತಲಮಾರು ಗಣೇಶನ ಮೂರ್ತಿಯ ತಯಾರಿಯಲ್ಲಿ ತೊಡಗಿದೆ. ನಾವು ಮನೆಮಂದಿ ಸೇರಿ ಮಾಡುತ್ತಿದ್ದೇವೆ. ನಾವು ಮಾಡುವ ವಿಗ್ರಹಗಳಲ್ಲಿ 16 ಸಾರ್ವಜನಿಕ ಗಣೇಶೋತ್ಸವ ಗಣಪತಿ ಸೇರಿದಂತೆ 260 ಗಣಪತಿ ತಯಾರಿ ಮಾಡುತ್ತಿದ್ದೇವೆ. ಪರಿಸರ ಪ್ರೇಮಿ ಗಣೇಶನ ಮೂರ್ತಿ ತಯಾರಿಸುತ್ತಿದ್ದೇವೆ. ಆವೆ ಮಣ್ಣಿನಿಂದ ಮೂರ್ತಿ ತಯಾರಿಸಿ ಲೆಡ್ ಪ್ರಿ ಬಣ್ಣವನ್ನು ಹಾಕುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವೃತ್ತಿಯಲ್ಲಿ ಪತ್ರಕರ್ತ, ಪ್ರವೃತ್ತಿಯಲ್ಲಿ ಗಣೇಶ ಮೂರ್ತಿಕಾರ: ಇದು ಅಪ್ಪಟ ಪರಿಸರಸ್ನೇಹಿ ಮೂರ್ತಿ ತಯಾರಿಕಾ ಕುಟುಂಬ - Ecofriendly Ganesha idol

ABOUT THE AUTHOR

...view details