ಚಾಮರಾಜನಗರ: ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂ. ನಾಣ್ಯಗಳನ್ನು ಬಳಸಬೇಕು. ಈ ಸಂಬಂಧ ಇರುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ ಮಾಡಿದ್ದಾರೆ.
10 ರೂ. ಬೆಲೆಯ ನಕಲಿ ನಾಣ್ಯಗಳು ಚಾಲ್ತಿಯಲ್ಲಿವೆ ಎಂಬ ವದಂತಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ತಪ್ಪು ಮಾಹಿತಿಯಿಂದಾಗಿ ಜನಸಾಮಾನ್ಯರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಿರುವುದು ಗಮನಕ್ಕೆ ಬಂದಿದೆ. 10 ರೂ. ನಾಣ್ಯವು ರಿಸರ್ವ್ ಬ್ಯಾಂಕ್ ನೀಡಿದ ಕಾನೂನುಬದ್ಧ ಮತ್ತು ದೇಶಾದ್ಯಂತ ಬಳಕೆಗೆ ಮಾನ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ದೈನಂದಿನ ವಹಿವಾಟುಗಳಲ್ಲಿ ಈ ನಾಣ್ಯವನ್ನು ಸ್ವೀಕರಿಸಲಾಗುತ್ತಿದೆ ಮತ್ತು ಬಳಸಲಾಗುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.
10 ರೂ. ನಾಣ್ಯ ಚಲಾವಣೆ ಕುರಿತು ಚಾಮರಾಜನಗರ ಡಿಸಿ ಮನವಿ (ETV Bharat) ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂ. ನಾಣ್ಯಗಳನ್ನು ಬಳಸುವುದನ್ನು ಮುಂದುವರಿಸಬೇಕು. ಸಾಮಾನ್ಯ ಆರ್ಥಿಕ ಚಟುವಟಿಕೆ ಅಡ್ಡಿಪಡಿಸುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್, ಆಟೋ ಚಾಲಕರು, ಹೋಟೆಲ್, ರೆಸ್ಟೋರೆಂಟ್, ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಮೆಡಿಕಲ್ ಶಾಪ್, ಚಲನಚಿತ್ರಮಂದಿರ, ಬೀದಿ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳು 10 ರೂ. ನಾಣ್ಯವನ್ನು ಸ್ವೀಕರಿಸಬೇಕು ಮತ್ತು ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಆರ್ಬಿಐ ನೀಡಿತ್ತು ಸ್ಪಷ್ಟನೆ ಸಂದೇಶ;ಆರ್ ಬಿಐ ಹತ್ತು ರೂಪಾಯಿ ನಾಣ್ಯಗಳನ್ನು ನಿಷೇಧಿಸಿದೆ, ನಕಲಿ ನೋಟುಗಳು ಹುಟ್ಟಿಕೊಂಡಿವೆ ಎಂಬ ವದಂತಿಗಳನ್ನು ನಂಬಬೇಡಿ. ಅವುಗಳ ವ್ಯಾಪಾರ ವಹಿವಾಟನ್ನು ಯಾವುದೇ ಸಮಸ್ಯೆಗಳಿಲ್ಲದೆ ನಡೆಸಬಹುದು ಮತ್ತು ಬ್ಯಾಂಕ್ ಖಾತೆಗಳಲ್ಲಿ ಠೇವಣಿಯನ್ನು ಮಾಡಬಹುದು. ನಾಣ್ಯಗಳನ್ನು ಸ್ವೀಕರಿಸದ ಯಾವುದೇ ವ್ಯಕ್ತಿಯನ್ನು 2011 ರ ಸೆಕ್ಷನ್ 61 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ 2005 ಮತ್ತು 2019 ರ ನಡುವೆ 10 ರೂಪಾಯಿ ನಾಣ್ಯಗಳನ್ನು ಪರಿಚಯಿಸಿತ್ತು. ಇವು ವಿವಿಧ ರೂಪಗಳಲ್ಲಿ ಜನರನ್ನು ತಲುಪಿವೆ. ಸುಬೇದಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ರೆಡ್ಡಿ ಈ ವಿಚಾರದ ಕುರಿತು ಮಾತನಾಡಿದ್ದರು. ಆರ್ ಬಿಐ ನಿಯಮದ ಪ್ರಕಾರ ರೂ.10 ನಾಣ್ಯಗಳು ಮಾನ್ಯವಾಗಿದ್ದು, ಯಾರೂ ತಿರಸ್ಕರಿಸಬಾರದು. ನಾಣ್ಯಗಳನ್ನು ಸ್ವೀಕರಿಸದಿರುವ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದರು.
ಹೆಚ್ಚಿನ ಮಾಹಿತಿಗೆ ಈ ಸುದ್ದಿಯನ್ನೂ ಓದಿ: ಅಯ್ಯೋ 'ನನ್ನನ್ನೇಕೆ ದೂರ ಮಾಡಿದ್ದೀರಿ: ದಯವಿಟ್ಟು ನನ್ನನ್ನು ಸ್ವಲ್ಪ ಬಳಸಿ' 10 ರೂ ನಾಣ್ಯದ ಕಥೆ -ವ್ಯಥೆ - WHAT SAYS RBI ABOUT 10Rs COIN