ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಚಿನ್ನ ಗೆಲ್ಲುವ ಭರವಸೆ ಹುಟ್ಟಿಸಿದ್ದ ಯುವ ಪೈಲ್ವಾನ್ ಅಮನ್ ಸೆಹ್ರಾವತ್ 57 ಕೆಜಿ ಫ್ರೀ ಸ್ಟೈಲ್ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಜಪಾನ್ನ ಜಟ್ಟಿ ರೇ ಹಿಗುಚಿ ವಿರುದ್ಧ ಅವರು ಪರಾಭವಗೊಂಡರು. 21ರ ಹರೆಯದ ಅಮನ್ ಈಗ ಕಂಚಿನ ಪದಕಕ್ಕಾಗಿ ಆಡಲಿದ್ದಾರೆ.
ಕ್ವಾರ್ಟರ್ಫೈನಲ್ನಲ್ಲಿ ಪ್ರಸಿದ್ಧ ಎದುರಾಳಿಗಳ ವಿರುದ್ಧ ದೊಡ್ಡ ವಿಜಯ ಸಾಧಿಸಿ, ಫೈನಲ್‌ನತ್ತ ಮುನ್ನುಗ್ಗುತ್ತಿದ್ದ ಅಮನ್ ಚಿನ್ನದ ನಿರೀಕ್ಷೆ ಹುಟ್ಟಿಸಿದ್ದರು. ಆದರೆ, 2016ರ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ 28 ವರ್ಷದ ಜಪಾನಿನ ಹಿಗುಚಿ ಪಟ್ಟುಗಳ ಮುಂದೆ ಭಾರತದ ಜಟ್ಟಿಯ ಆಟ ನಡೆಯಲಿಲ್ಲ.