ಹೈದರಾಬಾದ್: ಕಳೆದ ಎರಡು ದಿನಗಳ ಹಿಂದಷ್ಟೇ ಕಿವೀಸ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇವರ ಬೆನ್ನಲ್ಲೆ ಟೀಂ ಇಂಡಿಯಾದ ಮಾರಕ ವೇಗಿ ವಿದಾಯ ಘೋಷಿಸಿದ್ದಾರೆ.
ಈ ಹಿಂದೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ವೇಗದ ಬೌಲರ್ ವರುಣ್ ಆರೋನ್ ತಮ್ಮ 20 ವರ್ಷಗಳ ಕ್ರಿಕೆಟ್ ವೃತ್ತಿಜೀವನವನ್ನು ಇಂದು ಕೊನೆಗೊಳಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಃ ವರುಣ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
2010-11ರ ವಿಜಯ್ ಹಜಾರೆ ಟ್ರೋಫಿ ಫೈನಲ್ ವೇಳೆ ವರುಣ್ ಆರನ್ ಬೆಳಕಿಗೆ ಬಂದಿದ್ದರು. ಅಲ್ಲಿ ಅವರು ಗಂಟೆಗೆ 153 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ನೆರೆದಿದ್ದವರ ಗಮನ ಸೆಳೆದಿದ್ದರು. ಸ್ಥಿರ ವೇಗದಲ್ಲಿ ಬೌಲಿಂಗ್ ಮಾಡುವ ಅವರ ಸಾಮರ್ಥ್ಯ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿತು. ಅದರಂತೆ ಒಂಬತ್ತು ಟೆಸ್ಟ್ ಮತ್ತು ಒಂಬತ್ತು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು, ಈ ವೇಳೆ, ಎರಡೂ ಸ್ವರೂಪದಲ್ಲಿ ಒಟ್ಟು 29 ವಿಕೆಟ್‌ಗಳನ್ನು ಪಡೆದರು. ಭಾರತ ತಂಡದಲ್ಲಿ ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದ ವರುಣ್ ಗೆ ಸರಣಿ ಗಾಯಗಳಿಂದಾಗಿ ಅವರ ಅಂತಾರಾಷ್ಟ್ರೀಯ ಕೆರಿಯರ್ ಸಂಕಷ್ಟಕ್ಕೆ ಸಿಲುಕುವಂತಾಯ್ತು.
ಆರನ್ ಕಳೆದ ವರ್ಷ ಫೆಬ್ರವರಿಯಲ್ಲಿ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಿಹಾರ ಮೂಲದ ಇವರು ನವೆಂಬರ್ 2011 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದ ಮೂಲಕ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು ಮತ್ತು 2015ರಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಆಡಿದ್ದರು. ಅಕ್ಟೋಬರ್ 2011 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. 2014ರ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವಾಗಿತ್ತು.
ಇದನ್ನು ಹೊರತು ಪಡಿಸಿ ಐಪಿಎಲ್ ನಲ್ಲೂ ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್‌ನಂತಹ ತಂಡಗಳಿಗಾಗಿ ಆಡಿದ್ದಾರೆ. ಒಟ್ಟು 52 ಐಪಿಎಲ್ ಪಂದ್ಯಗಳಲ್ಲಿ 44 ವಿಕೆಟ್ ಗಳನ್ನು ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ 66 ಪ್ರಥಮ ದರ್ಜೆ ಪಂದ್ಯಗಳಲ್ಲಿ 173 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ನಿವೃತ್ತಿ ಕುರಿತು ಪೋಸ್ಟ್ ಮಾಡಿರುವ ವರುಣ್,ಕಳೆದ 20 ವರ್ಷಗಳಿಂದ ವೇಗದ ಬೌಲಿಂಗ್ ಆನಂದಿಸಿದ್ದೇನೆ. ಆದರೆ, ಇಂದು ನಾನು ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತೇನೆ. ದೇವರು, ಕುಟುಂಬ, ಸ್ನೇಹಿತರು, ಸಹ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳು ಇಲ್ಲದಿದ್ದರೆ ನನ್ನ ಈ ಪ್ರಯಾಣವು ಸಾಧ್ಯವಾಗುತ್ತಿರಲಿಲ್ಲ. ನನ್ನ ವೃತ್ತಿಜೀವನದಲ್ಲಿ ಹೆಚ್ಚಿನ ಸಮಯ ಗಾಯಗಳೊಂದಿಗೆ ಹೋರಾಡಿದ್ದೇನೆ.
ನನಗೆ ಬೆಂಬಲಿಸಿದ ಬಿಸಿಸಿಐ, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ, ರೆಡ್ ಬುಲ್ ಮತ್ತು ಎಸ್‌ಜಿ ಕ್ರಿಕೆಟ್‌ಗೂ ಧನ್ಯವಾದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ: ಶಾಕಿಂಗ್ ನ್ಯೂಸ್! ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ಧು: ಅಭಿಮಾನಿಗಳಿಗೆ ಭಾರೀ ನಿರಾಸೆ