ದಾವಣಗೆರೆ: ದಾವಣಗೆರೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಏರುತ್ತಿವೆ. ನಿಯಮ ಉಲ್ಲಂಘಿಸುವ ಮನೆಗೆ ಪೊಲೀಸ್ ಇಲಾಖೆ ನೋಟಿಸ್ ಮೂಲಕ ದಂಡದ ಚಲನ್ ಕಳುಹಿಸುತ್ತಿದೆ. ಆದರೆ ಅನೇಕ ಸವಾರರು ದಂಡದ ಮೊತ್ತವನ್ನೂ ಪಾವತಿಸುತ್ತಿಲ್ಲ. ಸವಾರರ ಮನೆಗೆ ರವಾನೆಯಾದ ಸ್ವಯಂಚಾಲಿತ ನೋಟಿಸ್‌ಗಳಿಂದ 10 ಕೋಟಿ ರೂ ದಂಡ ವಸೂಲಾಗಬೇಕಿದೆ.
ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲು ದಾವಣಗೆರೆ ಸ್ಮಾರ್ಟ್ ಸಿಟಿ ಲಿ ಐಸಿಟಿ ಯೋಜನೆಯಡಿ ಉತ್ತಮ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 'ಇನ್‌ಫರ್ಮೇಷನ್ ಆ್ಯಂಡ್ ಕಮ್ಯೂನಿಕೇಷನ್ ಟೆಕ್ನಾಲಜಿ' (ಐಸಿಟಿ) ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ಮನೆಗೆ ಸ್ವಯಂಚಾಲಿತವಾಗಿ ನೋಟಿಸ್ ಕಳುಹಿಸಲಾಗುತ್ತಿದೆ. ಈ ಕ್ಯಾಮೆರಾಗಳ ಸಹಾಯದಿಂದ ನಿತ್ಯ ನೂರಾರು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇದ್ಯಾವುದಕ್ಕೂ ವಾಹನ ಸವಾರರು ಕ್ಯಾರೆನ್ನುತ್ತಿಲ್ಲ.
ಅಂಕಿ-ಅಂಶಗಳು: 2020ರಿಂದ 2024ರವರೆಗೆ 2.96 ಲಕ್ಷ ಸ್ವಯಂಚಾಲಿತವಾಗಿ ರವಾನೆಯಾಗಿರುವ ನೋಟಿಸ್‌ಗಳು ವಿಲೇವಾರಿಗೆ ಬಾಕಿ ಇವೆ. ಇವುಗಳಲ್ಲಿ 2023 ಜನವರಿಯಿಂದ 2024 ಡಿಸೆಂಬರ್‌ತನಕ 1.93 ಲಕ್ಷ ನೋಟಿಸ್ ರವಾನೆಯಾಗಿದ್ದು, 9,788 ನೋಟಿಸ್‌ಗಳಿಂದ 51 ಲಕ್ಷ ರೂ ದಂಡ ಮಾತ್ರ ಪಾವತಿಯಾಗಿದೆ. ಈ ಅವಧಿಯ 2 ಲಕ್ಷ ನೋಟಿಸ್‌ಗಳಿಂದ ಇನ್ನೂ 10 ಕೋಟಿ ರೂ ಬಾಕಿ ಇದೆ.
ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯೆ: "ಇಂಟಿಗ್ರೇಟೆಡ್ ಕಮಾಂಡೆಟ್ ಕಂಟ್ರೋಲ್ ಸೆಂಟರ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಚಲನ್ ರವಾನೆಯಾಗುತ್ತಿದೆ. ಚಲನ್ ರವಾನಿಸಿದರೂ ಎರಡು ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಕೇಸುಗಳು ಬಾಕಿ ಇದ್ದು, 10 ಕೋಟಿ ರೂ ದಂಡ ಬಾಕಿ ಇದೆ. ಕೆಲವರು ದಂಡ ಪಾವತಿಸಿದ್ರೆ ಮತ್ತಷ್ಟು ಮಂದಿ ಪಾವತಿಸಲು ಮುಂದೆ ಬರುತ್ತಿಲ್ಲ. ಪೊಲೀಸ್ ಠಾಣೆಗೆ, ಪೋಸ್ಟ್ ಆಫೀಸ್ಗಳಲ್ಲಿ ದಂಡ ಪಾವತಿ ಮಾಡಬಹುದು. ಡಿವಿಜಿ ಹೆಲ್ಪ್ ಆ್ಯಪ್‌ನಲ್ಲಿಯೂ ಪಾವತಿ ಸಾಧ್ಯವಿದೆ. ಎರಡು ಲಕ್ಷ ಪ್ರಕರಣಗಳ ಪೈಕಿ, 10 ಕೋಟಿ ಹಣ ಪಾವತಿ ಆಗ್ಬೇಕಾಗಿದೆ. ಜಾಗೃತಿ ಮೂಡಿಸುತ್ತಿದ್ದೇವೆ. ಅಲ್ಲದೇ ಶೇ 50 ಕಡಿಮೆ ದಂಡ ಪಾವತಿ ಮಾಡುವಂತೆಯೂ ಸರ್ಕಾರ ಆದೇಶಿಸಿತ್ತು. ಆಗ ಸ್ವಲ್ಪ ಮಟ್ಟಿಗೆ ಜನ ಚಲನ್ಸ್ ಕಟ್ಟಿದ್ದಾರೆ" ಎಂದು ಎಸ್ಪಿ ಉಮಾಪ್ರಶಾಂತ್ ಹೇಳಿದರು.