ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸವಿರುವ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶವಿರುವುದು ಲ್ಯಾಬ್ ಪರೀಕ್ಷೆಯಿಂದ ಪತ್ತೆಯಾಗಿದೆ.
ಪ್ರತಿ ವರ್ಷದಂತೆ ಈ ಬಾರಿ 15 ದಿನಗಳ ಹಿಂದೆ ಗುಜ್ಜರಕೆರೆಯ ನೀರಿನ ಸ್ಯಾಂಪಲ್ ಅನ್ನು ಫಿಶರೀಸ್ ಕಾಲೇಜಿಗೆ ರವಾನಿಸಿ ತಪಾಸಣೆ ನಡೆಸಲಾಗಿದೆ. ಆದರೆ ವರದಿಯಲ್ಲಿ ಕೆರೆಗೆ ಹರಿದು ಬರುವ ತ್ಯಾಜ್ಯ ನೀರಿನಲ್ಲಿ (ಕೋಲಿಫಾರ್ಮ್) ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಆದರೆ ಬೃಹತ್ತಾದ ಕೆರೆಯಲ್ಲಿ ಹರಡುವ ಕಾರಣ ಕೆರೆಯ ನೀರಿನಲ್ಲಿ ಬ್ಯಾಕ್ಟೀರಿಯಾ ಅಂಶ ಹೆಚ್ಚಿನ ರೀತಿಯಲ್ಲಿ ಪತ್ತೆಯಾಗಿಲ್ಲ. ಆದ್ದರಿಂದ ಹೊರಗಿನಿಂದ ಬರುವ ತ್ಯಾಜ್ಯ ನೀರಿನಿಂದಲೇ ಬ್ಯಾಕ್ಟೀರಿಯಾ ಅಂಶವಿರುವುದು ವರದಿಯಲ್ಲಿ ಬಯಲಾಗಿದೆ.
ಈ ಎರಡೂ ವರದಿಯನ್ನು ತೀರ್ಥ ಸಂರಕ್ಷಣಾ ವೇದಿಕೆ, ಸ್ಥಳೀಯ ಶಾಸಕರು, ಮೇಯರ್ ಹಾಗೂ ಮನಪಾಕ್ಕೆ ನೀಡಲಾಗಿದೆ. 15 ದಿನಗಳಾದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ.
ಕೆರೆಗೆ ಹರಿದು ಬರುವ ಕಲುಷಿತ ನೀರಿಗೆ ತಡೆಯೊಡ್ಡದೆ ಗುಜ್ಜರಕೆರೆಯ ನೀರು ಶುದ್ಧವಾಗುವುದಿಲ್ಲ. ಆದ್ದರಿಂದ ತ್ಯಾಜ್ಯ ನೀರು ಕೆರೆಗೆ ಹರಿಯುವುದನ್ನು ತಡೆದಲ್ಲಿ ಮಾತ್ರ ನೀರು ಶುದ್ಧವಾಗಿ ಬಳಕೆಗೆ ಯೋಗ್ಯವಾಗಬಹುದು ಎನ್ನುತ್ತಾರೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ.ನೇಮು ಕೊಟ್ಟಾರಿ.
"ಸ್ಥಳೀಯರ ಅಭಿಪ್ರಾಯ, ಬೇಡಿಕೆಗಳಿಗೆ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಿದರೆ ಮಾತ್ರ ಪರಿಸರ ಸಂಪತ್ತು ಉಳಿಯಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಕಲುಷಿತ ಪರಿಸರವನ್ನು ನಾವು ದಾಟಿಸಬೇಕಾಗುತ್ತದೆ. ಹತ್ತಾರು ಕೋಟಿ ಸ್ಮಾರ್ಟ್‌ಸಿಟಿ ಹಣವನ್ನು ಖರ್ಚು ಮಾಡಿ ನಿರ್ಮಾಣವಾಗಿರುವ ಗುಜ್ಜರಕೆರೆಯ ನೀರು ಶುದ್ಧವಾಗಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಇನ್ನಾದರೂ ಮನಸ್ಸು ಮಾಡಬೇಕಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: 9 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ: ಉದ್ಘಾಟನೆಗೂ ಮುನ್ನವೇ ಕಳೆಗುಂದುತ್ತಿರುವ ಕೆಂಪಕೆರೆ