ಬೆಂಗಳೂರು : ವಂಶಪಾರಂಪರ್ಯದಿಂದ ಬಂದಿರುವ ಆಸ್ತಿಗಳನ್ನು ವಾರಸುದಾರರ ಹಕ್ಕಿನ ಮೂಲಕ ಮಾಲೀಕತ್ವ ಪಡೆಯುವ ಬಗ್ಗೆ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಸ್ಥಿರಾಸ್ತಿ ಮಾಲೀಕತ್ವ ಹೇಗೆ ನೋಂದಣಿ ಹಾಗೂ ದಸ್ತಾವೇಜು ಮಾಡಿಸಿಕೊಳ್ಳಬೇಕು. ಅದಕ್ಕೆ ಬೇಕಿರುವ ದಾಖಲೆಗಳು ಹಾಗೂ ನಿಯಮವೇನು? ಎಂಬುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಅದಕ್ಕಾಗಿ ವಕೀಲರ ನೆರವು ಪಡೆದುಕೊಳ್ಳುತ್ತಾರೆ. ಸ್ಥಿರಾಸ್ತಿ ಮಾಲೀಕತ್ವದ ನೋಂದಣಿ ಹಾಗೂ ದಸ್ತಾವೇಜು ಮಾಡಿಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸುದಾರರ ಹಕ್ಕಿನ ಮೂಲಕ ಸ್ಥಿರಾಸ್ತಿಯ ಮಾಲೀಕತ್ವವನ್ನು ಮರಣ ಶಾಸನ ಪತ್ರಗಳ ಮೂಲಕ, ಸ್ವಯಾರ್ಜನೆ, ದಾನ, ಟ್ರಸ್ಟ್, ವ್ಯವಸ್ಥಾ ಪತ್ರಗಳು, ಸರ್ಕಾರದಿಂದ ಅನುದಾನ, ಇನಾಮು ಹಾಗೂ ಕೋರ್ಟ್ ಡಿಕ್ರಿ ಮೂಲಕ ಪಡೆಯಬಹುದಾಗಿದೆ.
ಅಂದರೆ ಆಸ್ತಿಯ ಮಾಲೀಕತ್ವವನ್ನು ಎರಡು ವಿಧದಲ್ಲಿ ಪಡೆಯುತ್ತಾರೆ. ಜನರು ತಮ್ಮ ತಮ್ಮಲ್ಲಿ ಮಾಡಿಕೊಂಡ ವ್ಯವಹಾರಗಳಿಂದಾಗಿ ನಡೆಯುವುದು. ಉದಾಹರಣೆ ಹೇಳುವುದಾದರೆ, ಖರೀದಿ, ದಾನದ ಮೂಲಕ ಪಡೆಯಬಹುದು. ವಾರಸುದಾರರ ಹಕ್ಕಿನ ಮೂಲಕ ಬಂದ ಆಸ್ತಿಯ ಖಾತೆ ವರ್ಗಾವಣೆ ಮಾಡಿಸಿಕೊಳ್ಳಲು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಅಗತ್ಯವಿಲ್ಲ. ಆಸ್ತಿಯ ಮಾಲೀಕನ ಮರಣಾ ನಂತರ ಆತನ ಹೆಂಡತಿ ಮತ್ತು ಮಕ್ಕಳು ಅಂದರೆ ಗಂಡು ಮತ್ತು ವಿವಾಹಿತ/ ಅವಿವಾಹಿತ ಹೆಣ್ಣು ಮಕ್ಕಳು ನೇರ ವಾರಸುದಾರರಾಗುತ್ತಾರೆ. ಮರಣ ಹೊಂದಿದ ವ್ಯಕ್ತಿಯ ಮರಣ ದೃಢೀಕರಣ (ಮರಣ ಉತ್ತರ) ಸರ್ಟಿಫೀಕೇಟ್ ನೊಂದಿಗೆ ಆಸ್ತಿಯ ವಿವರಗಳನ್ನು ಮತ್ತು ಅರ್ಜಿಯನ್ನು ಪ್ರಮಾಣ ಪತ್ರದೊಂದಿಗೆ ಈ ಕೆಳಕಂಡ ಅಧಿಕಾರಿಗಳಿಗೆ ಸಲ್ಲಿಸಿ, ಖಾತೆ ವರ್ಗಾವಣೆ ಮಾಡಿಸಿಕೊಳ್ಳಬಹುದು.
ಕೃಷಿ ಜಮೀನುಗಳಿದ್ದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರರಿಗೆ, ನಿವೇಶನ- ಮನೆಗಳಾಗಿದ್ದಲ್ಲಿ ಆಸ್ತಿ ಇರುವ ಪ್ರದೇಶದ ಮಹಾನಗರ ಪಾಲಿಕೆ, ನಗರಸಭೆ, ಗ್ರಾಮ ಪಂಚಾಯಿತಿ, ಸಿಟಿ ಸರ್ವೆ ಇದ್ದಲ್ಲಿ ಸಿಟಿ ಸರ್ವೆ ಕಚೇರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಯಾವ ದಸ್ತಾವೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು : ಸ್ಥಿರ ಆಸ್ತಿಯ ದಾನ ಪತ್ರಗಳು, 100 ರೂ. ಮತ್ತು ಅದರ ಮೇಲ್ಪಟ್ಟ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಹಕ್ಕು ಸ್ವಾಮ್ಯ ಹಾಗೂ ಹಿತಾಸಕ್ತಿಯನ್ನು (Right tittle and interest) ಅಥವಾ ಮುಂದಾಗಲಿ ಸೃಜಿಸಲು, ಘೋಷಿಸಲು, ಹಸ್ತಾಂತರಿಸಲು, ಪರಿಮಿತಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ತಾತ್ಪರ್ಯವಾಗುವಂತಹ ತಕ್ಷಣವೇ ಜಾರಿಯಲ್ಲಿ ಬರುವಂತಹ ದಸ್ತಾವೇಜುಗಳನ್ನ ನೋಂದಾಯಿಸಬೇಕು.
ಆಸ್ತಿಗಳ ವಿಭಾಗ ಹೇಗೆ? : ವಿಭಾಗ ಮಾಡಿಕೊಳ್ಳುವ ಆಸ್ತಿಗಳನ್ನು ವಿಭಾಗ ಮಾಡಿಕೊಳ್ಳಬಹುದು. ಈ ವಿಭಾಗದಿಂದ ಆಸ್ತಿಯಲ್ಲಿ ಹಕ್ಕುಗಳು ಉತ್ಪನ್ನವಾಗಿ ಇಂತಹ ವಿಭಾಗವನ್ನು ದಸ್ತಾವೇಜಿನ ಮೂಲಕ ಜಾರಿಗೆ ತಂದ ಸಂದರ್ಭದಲ್ಲಿ ಈ ಹಿಸ್ಸಾ ಪತ್ರ ( ವಾಟ್ನಿ) / ವಿಭಾಗ ಪತ್ರವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ. ಬಾಯಿ ಮಾತಿನ ಹಿಸ್ಸೆ ಮಾಡಿಕೊಂಡು ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವಂತಹ ಸಂದರ್ಭದಲ್ಲಿ ಈ ವರದಿಯನ್ನು ನೋಂದಾಯಿಸುವ ಅಗತ್ಯವಿಲ್ಲ. ಯಾವುದೇ ರೀತಿಯಲ್ಲಿ ಮಾಡಿಕೊಂಡ ಹಿಸ್ಸಾಪತ್ರ (ವಾಟ್ನಿ) / ವಿಭಾಗ ಪತ್ರಕ್ಕೆ ಈ ಪತ್ರ ನೋಂದಾಯಿಸುವಂತದ್ದಾಗಿರಲಿ ಅಥವಾ ನೋಂದಾಯಿಸದೇ ಇರುವಂತಹದ್ದಾಗಿರಲಿ, ಮುದ್ರಾಂಕ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ. ಹಿಸ್ಸೆ ಮಾಡಿಕೊಳ್ಳುವವರು ಪರಸ್ಪರ ಒಪ್ಪಂದದ ಪ್ರಕಾರ ಹಿಸ್ಸೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ವಾರಸುದಾರರು ಇಬ್ಬರು ಹಾಗೂ ಅದಕ್ಕೂ ಹೆಚ್ಚು ಜನ ಇದ್ದಾಗ್ಯೂ ಒಬ್ಬ ಅಥವಾ ಇಬ್ಬರನ್ನೇ ಪೂರ್ಣ ಮಾಲೀಕರನ್ನಾಗಿ ಮಾಡಿ ಉಳಿದವರು ತಮ್ಮ ಹಿಸ್ಸೆಯ ಬಾಬ್ತು ಹಣ ಪಡೆಯಬಹುದು. ಆಸ್ತಿಯ ಒಟ್ಟು ಮಾಲೀಕರಲ್ಲಿ ಒಬ್ಬರಿಗೆ ಇನ್ನೊಬ್ಬರು ಅಥವಾ ಎಲ್ಲರೂ ಸೇರಿ ಇಬ್ಬರಿಗೆ ತಮ್ಮ ಹಕ್ಕು ಬಿಟ್ಟುಕೊಟ್ಟು ಒಬ್ಬರನ್ನು ಪೂರ್ಣ ಮಾಲೀಕರನ್ನಾಗಿ ಮಾಡಬಹುದು. ಈ ಹಕ್ಕು ಖುಲಾಸೆಯನ್ನು ಹಣವನ್ನು ಪಡೆದಾಗಲಿ ಅಥವಾ ಪಡೆಯದೆಯೇ ಮಾಡಬಹುದು. ಇದಕ್ಕೆ ಹಕ್ಕು ಖುಲಾಸೆ ಎನ್ನುತ್ತಾರೆ. ಹಕ್ಕು ಖುಲಾಸೆಯನ್ನು ಪಿತ್ರಾರ್ಜಿತ ಆಸ್ತಿಗಳಿಗಲ್ಲದೇ ಒಟ್ಟಾಗಿ ಖರೀದಿಸಿದ / ಪಡೆದ ಆಸ್ತಿಗಳ ವಿಷಯದಲ್ಲಿಯೂ ಮಾಡಿಕೊಳ್ಳಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಉಯಿಲ್ / ಇಚ್ಛಾ ಪತ್ರ : ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಹಕ್ಕುಗಳುಳ್ಳ ಆಸ್ತಿಯನ್ನು ತನ್ನ ಮರಣಾ ನಂತರ ಯಾರಿಗೆ ಸಲ್ಲಬೇಕು ಎನ್ನುವುದನ್ನು ಬರೆದಿಡುವುದಕ್ಕೆ ಮರಣ ಶಾಸನ (ಉಯಿಲ್) ಎನ್ನುತ್ತಾರೆ. ಮರಣ ಶಾಸನದ ಪ್ರಕಾರ, ಆಸ್ತಿ ಯಾರಿಗೆ ಸೇರಬೇಕು ಎಂದು ಬರೆಯಲಾಗಿದೆಯೋ ಅವರಿಗೆ ಮರಣ ಶಾಸನ ಬರೆದ ವ್ಯಕ್ತಿಯ ಮರಣಾ ನಂತರ ಸೇರುತ್ತದೆ. ಅಪ್ರಾಪ್ತನನ್ನು ಹೊರತುಪಡಿಸಿ 19 ವರ್ಷಗಳ ವಯಸ್ಸನ್ನು ಮೀರಿದ ಮತ್ತು ಮಾನಸಿಕ ಸ್ವಾಸ್ಥ ಹೊಂದಿರುವ ಯಾವುದೇ ವ್ಯಕ್ತಿ ಮರಣ ಶಾಸನವನ್ನು (ಉಯಿಲ್) ಬರೆದಿಡಬಹುದು. ಆದರೆ, ವ್ಯಕ್ತಿಯೊಬ್ಬನ್ನು ಬೇರೆ ಒಬ್ಬರ ಬೆದರಿಕೆಗೆ, ಪ್ರಲೋಭನೆಗೆ, ಮರಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಮಯದಲ್ಲಿ ಮಾಡಿದ ಮರಣ ಶಾಸನವು ಊರ್ಜಿತವಾಗುವುದಿಲ್ಲ. ಆದ್ದರಿಂದ ಮರಣ ಶಾಸನ ಮಾಡುವ ವ್ಯಕ್ತಿಯು ಸಂಪೂರ್ಣವಾಗಿ ಸ್ವ ಇಚ್ಛೆಯಿಂದ ಮಾಡುವಂತಿರಬೇಕು.
ಇದು ಕಡ್ಡಾಯವಲ್ಲ: ಮರಣ ಶಾಸನವನ್ನು ನೋಂದಾಯಿಸುವುದು ಕಡ್ಡಾಯವಾಗಿರುವುದಿಲ್ಲ. ಮರಣ ಶಾಸನ (ಇಚ್ಛಾಪತ್ರ ) ಬರೆದಿಡುವವರು ಇಚ್ಛೆಪಟ್ಟಲ್ಲಿ ನೋಂದಾಯಿಸಬಹುದು. ಭಾರತ ದೇಶದ ಯಾವುದೇ ಉಪನೋಂದಣಿ ಅಧಿಕಾರಿ / ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆ ಮಾಡಿಸಬಹುದು. ಇಚ್ಛಾಪತ್ರವನ್ನು ನೋಂದಣಿ ಮಾಡಿಸಲು ಕಾಲದ ಮಿತಿ ಇರುವುದಿಲ್ಲ. ಮರಣ ಶಾಸನ ಮಾಡಿದ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಯಾವಾಗಲಾದರೂ ರದ್ದುಪಡಿಸಬಹುದು. ರದ್ದುಪಡಿಸಲು ನಿಗದಿತ 100 ರೂ. ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ.
ಬರೆದ ಮರಣ ಶಾಸನ (ಇಚ್ಛಾಪತ್ರ) ಸೀಲು ಮಾಡಿದ ಲಕೋಟೆಯಲ್ಲಿ ಇಟ್ಟು ಜಿಲ್ಲಾನೋಂದಣಾಧಿಕಾರಿಯವರ ಕಚೇರಿಯಲ್ಲಿ ಠೇವಣಿ ಮಾಡಬಹುದು.
ಠೇವಣಿ ಇಡಲು 1ಸಾವಿರ ರೂ ಶುಲ್ಕ: ಠೇವಣಿ ಮಾಡಲು 1000 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ವ್ಯಕ್ತಿ ಅಥವಾ ಅವರಿಂದ ಸೂಕ್ತ ಅಧಿಕಾರ ಪಡೆದ ವ್ಯಕ್ತಿ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಠೇವಣಿ ಹಿಂದಕ್ಕೆ ಪಡೆಯಲು 200 ರೂ. ಪಾವತಿ ಮಾಡಬೇಕಾಗುತ್ತದೆ. ಉಯಿಲು ಬರೆದ ವ್ಯಕ್ತಿಯು ಮೃತಪಟ್ಟ ಬಗ್ಗೆ ದಾಖಲೆ ಒದಗಿಸಿದರೆ ಜಿಲ್ಲಾ ನೋಂದಣಿ ಅಧಿಕಾರಿ ಹಾಗೂ ಅರ್ಜಿ ಸಲ್ಲಿಸಿದವರ ಸಮಕ್ಷಮದಲ್ಲಿ ಮೊಹರಾದ ಲಕೋಟೆಯನ್ನು ತೆರೆದು ನೋಂದಣಿ ಮಾಡಿ ಇಚ್ಛಿಸಿದಲ್ಲಿ ಅದರ ನಕಲನ್ನು ನೀಡುವರು. ಇದನ್ನು ತೆರೆದು ನೋಂದಾಯಿಸಲು 100 ರೂ. ಪಾವತಿಸಬೇಕಾಗುತ್ತದೆ. ಉಯಿಲು ಪತ್ರ ಬರೆದ ವ್ಯಕ್ತಿಯ ಮರಣ ನಂತರ ಮರಣ ದೃಢೀಕರಣ ಪತ್ರ ಹಾಗೂ ಅರ್ಜಿಯ ಜೊತೆ ಪ್ರಮಾಣ ಪತ್ರವನ್ನು ಮರಣ ಶಾಸನ ಪತ್ರದಲ್ಲಿ ನಮೂದಿಸಿದ ವ್ಯಕ್ತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದು.
ಈ ಬಗ್ಗೆ ವಕೀಲರು ಹೇಳುವುದಿಷ್ಟು: ಈ ಬಗ್ಗೆ ಹಿರಿಯ ವಕೀಲ ರಾಮಚಂದ್ರ ಅವರು ಮಾತನಾಡಿ, ಅಪ್ರಾಪ್ತ ವಯಸ್ಕರ, ಬುದ್ಧಿಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಸಂರಕ್ಷಣೆದಾರರು ಮರಣ ಶಾಸನವನ್ನು ಮಾಡುವಂತಿಲ್ಲ. ಮರಣ ಶಾಸನಕ್ಕೆ ಕನಿಷ್ಠ ಇಬ್ಬರು ವ್ಯಕ್ತಿಗಳು ಸಾಕ್ಷಿಗಳೆಂದು ಸಹಿ ಮಾಡಬೇಕು. ಈ ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮರಣ ಶಾಸನ ಬರೆದುಕೊಡುವವರು ಸಹಿ ಮಾಡಿದ್ದಾರೆಂದು ಷರಾ ಬರೆಯಬೇಕು. ಇನ್ನು ಬಿಕ್ಕಲಂದಾರ (ಪತ್ರ ಬರಹಗಾರ) ಸಾಕ್ಷಿ ಆಗುವುದಿಲ್ಲ. ಈತನನ್ನು ಹೊರತುಪಡಿಸಿ ಇಬ್ಬರು ಸಾಕ್ಷಿಗಳು ಸಹಿ ಹಾಕಬೇಕು. ಮರಣ ಶಾಸನದ ಮೂಲಕ ಪ್ರಯೋಜನ ಪಡೆಯುವ ವ್ಯಕ್ತಿಯು ಮರಣ ಶಾಸನಕ್ಕೆ ಸಾಕ್ಷಿ ಹಾಕಬಾರದು. ಏಕೆಂದರೆ ಮರಣ ಶಾಸನದ ಮೂಲಕ ಪಡೆಯುವ ಪ್ರಯೋಜನ ರದ್ದಾಗುತ್ತದೆ. ಮರಣ ಶಾಸನವು ವಿವಾದರಹಿತವಾಗಿ ಅನುಷ್ಠಾನಕ್ಕೆ ಬರಬೇಕಾದಲ್ಲಿ ಆಸ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಥತೆ ಅಥವಾ ಅಸ್ಪಷ್ಟತೆಗೆ ಅವಕಾಶಕೊಡದಂತೆ ಸ್ಪಷ್ಟವಾಗಿ ಸರಿಯಾಗಿ ಬರೆಯಬೇಕು ಹಾಗೂ ಆಸ್ತಿ ಪಡೆಯುವ ವ್ಯಕ್ತಿಗಳ ವಿವರಗಳನ್ನು ನಮೂದಿಸಬೇಕು' ಎಂದು ಹೇಳಿದರು.
ಇದನ್ನೂ ಓದಿ : ದಾಖಲೆಗಳಲ್ಲಿ ಹೆಸರು ಬದಲಾಯಿಸಿ ಮತ್ತೊಬ್ಬರ ಹೆಸರಿದ್ದ ತಕ್ಷಣ ಆಸ್ತಿ ಮಾಲೀಕತ್ವ ಬದಲಾಗದು: ಹೈಕೋರ್ಟ್ - High Court - HIGH COURT