ಬೆಳಗಾವಿ : ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ವೈದ್ಯರೊಬ್ಬರು 8 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರ ಹೆಸರನ್ನೇ ಇಟ್ಟಿರುವ ಆ ಆಸ್ಪತ್ರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಾರ್ಪಣೆ ಮಾಡುತ್ತಿದ್ದಾರೆ.
ಅಮೆರಿಕದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ ಸಂಪತ್ ಕುಮಾರ್. ಸದಾ ತಾಯ್ನಾಡಿಗೆ ಏನಾದರು ಮಾಡಬೇಕು ಎನ್ನುವ ಅವರಲ್ಲಿನ ತುಡಿತ ಈಗ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಬರೋಬ್ಬರಿ 8 ಕೋಟಿ ದೇಣಿಗೆ ನೀಡುವಂತೆ ಮಾಡಿದೆ. ಇದಕ್ಕೆ "ಕೆಎಲ್ಇ ಡಾ. ಸಂಪತ್ಕುಮಾರ್ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ" ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಅಥಣಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೂ 1 ಕೋಟಿ ದೇಣಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಇದೇ ಜ.10ರಂದು ಲೋಕಾರ್ಪಣೆ ಆಗುತ್ತಿದೆ.
ಹೆಸರಿನಲ್ಲಿ ಹೇಗೆ ಸಂಪತ್ತು ಇದೇಯೋ ಅದೇ ರೀತಿ ಹಣ, ಜ್ಞಾನ ಮತ್ತು ಹೃದಯ ಶ್ರೀಮಂತಿಕೆ ಇವರಲ್ಲಿ ಮೇಳೈಸಿದೆ. ಇವರಲ್ಲಿನ ಅಪ್ರತಿಮ ಪ್ರತಿಭೆಗೆ ವಿಶ್ವದ ದೊಡ್ಡಣ್ಣನೇ ಬಿಗಿದಪ್ಪಿಕೊಂಡಿದ್ದಾನೆ. ಡಾ. ಸಂಪತ್ಕುಮಾರ್ ಅಮೆರಿಕದ ಹಲವು ಅಧ್ಯಕ್ಷರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತರಲ್ಲಿ ಇವರೂ ಒಬ್ಬರು. ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ಇವರದ್ದು ಎಂದು ಅಲ್ಲಿನ ಮಾಧ್ಯಮಗಳೇ ಸುದ್ದಿ ಪ್ರಕಟಿಸಿವೆ ಎನ್ನುತ್ತಾರೆ ಹಿರಿಯ ಸಾಹಿತಿ ಸರೂಜು ಕಾಟ್ಕರ್.
ಡಾ. ಸಂಪತ್ಕುಮಾರ್ ತಂದೆ ಸಿದ್ರಾಮಪ್ಪ, ತಾಯಿ ಬಸವ್ವ. ಅಥಣಿಯಲ್ಲಿ ಇವರು ಪ್ರಸಿದ್ಧ ಬಟ್ಟೆ ವ್ಯಾಪಾರಿಗಳಾಗಿದ್ದರು. ಅಥಣಿ ಪಟ್ಟಣದ ಹುಂಡೇಕಾರ್ ಕನ್ನಡ ಶಾಲೆಯಲ್ಲಿ 1-5ನೇ ತರಗತಿ, 6-7 ಸರ್ಕಾರಿ ಪಬ್ಲಿಕ್ ಶಾಲೆ, ಜೆಎ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಬಳಿಕ ಬೆಳಗಾವಿ ಕೆಎಲ್ಇ ಸಂಸ್ಥೆಯ ಆರ್.ಎಲ್.ಎಸ್ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪಿಯುಸಿ ತೇರ್ಗಡೆಯಾಗುತ್ತಾರೆ. ನಂತರ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್, ಹುಬ್ಬಳ್ಳಿ ಕೆಎಂಸಿಯಲ್ಲಿ ಎಂಡಿ ಪೂರ್ಣಗೊಳಿಸಿದ್ದರು ಸಂಪತ್ ಕುಮಾರ್.
ತುರ್ತು ಪರಿಸ್ಥಿತಿ : ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಡಾ. ಸಂಪತ್ಕುಮಾರ್ ಭಾರತ ಬಿಟ್ಟು ಅಮೆರಿಕಕ್ಕೆ ತೆರಳಿದ್ದರು. ಇದಕ್ಕೂ ಮೊದಲು ಎರಡು ವರ್ಷ ಬೆಳಗಾವಿಯ ಜವಾಹರಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಇವರು ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಬಾಲ್ಟಿಮೋರ್ ಜಾನ್ಸ್ ಹಾಫ್ ಕಿನ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಫೆಲೋಶಿಪ್ ಪಡೆದುಕೊಂಡರು. ಬಳಿಕ ಸೆಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿ ಆಫ್ ಅಲಾಬಾಮಾದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು.
ವಿಕ್ಸಬರ್ಗ್ ಆಸ್ಪತ್ರೆಯಲ್ಲಿ ಗೈನಾಕಾಲಾಜಿಸ್ಟ್ ಆಗಿ ಸೇರಿಕೊಂಡ ಅವರು ಅಲ್ಲಿ ಕೈಗೊಂಡ ಶಸ್ತ್ರಚಿಕಿತ್ಸೆಗಳು ಸಾಕಷ್ಟು ಮೆಚ್ಚುಗೆ ಪಡೆದವು. ಅಮೆರಿಕದಲ್ಲೇ ಪ್ರಸಿದ್ಧ ವೈದ್ಯನಾಗಿ ಸಂಪತ್ಕುಮಾರ್ ಹೊರ ಹೊಮ್ಮಿದರು. ಮಿಸ್ಸಿಸಿಪ್ಪಿ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಡಾ. ಸಂಪತ್ಕುಮಾರ್ ಅವರು ಕಳೆದ 45 ವರ್ಷಗಳಿಂದ ಅಮೆರಿಕದ ಮಿಸ್ಸಿಸಿಪ್ಪಿಯಲ್ಲಿ ನೆಲೆಸಿದ್ದಾರೆ. ಪತ್ನಿ ಡಾ. ಉದಯಾ ಅವರು 'ಸ್ಲಿಪ್ ಡಿಸಾರ್ಡರ್ ಸ್ಪೆಷಲಿಸ್ಟ್' ಆಗಿದ್ದು, ಪುತ್ರಿಯರಾದ ಪ್ರಿಯಾ ಮತ್ತು ಪೂಜಾ ಅವರು ಕೂಡ ಅಮೆರಿಕದ ಉನ್ನತ ಸ್ಥಾನಗಳಲ್ಲಿದ್ದಾರೆ .
ಇಂದಿರಾ ಗಾಂಧಿಗೆ ಕನ್ನಡಿಗರ ಸ್ಥಿತಿ ಮನವರಿಕೆ : ಕಲಿಯುತ್ತಿರುವುದು ವೈದ್ಯಕೀಯ ಕೋರ್ಸ್ ಆದರೂ ಹೋರಾಟದ ಕೆಚ್ಚೆದೆ, ಕನ್ನಡಾಭಿಮಾನ, ನಾಯಕತ್ವ ಗುಣ ಹೊಂದಿದ್ದ ಡಾ. ಸಂಪತ್ಕುಮಾರ್ ಅವರು, ಗಡಿ ವಿವಾದ ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆದ ದಬ್ಬಾಳಿಕೆ ವಿರುದ್ಧ ಸಿಡಿದೆದ್ದಿದ್ದರು . ಹುಬ್ಬಳ್ಳಿ ಬಂದ್ ಮಾಡಿ ಬಿಸಿ ಮುಟ್ಟಿಸಿದ್ದರು ಎಂದು ಕಾಟ್ಕರ್ ನೆನಪು ಮಾಡಿಕೊಂಡಿದ್ದಾರೆ.
ಇದೇ ವೇಳೆ ಡಾ. ಸಂಪತ್ಕುಮಾರ್ ನೇತೃತ್ವದ ನಿಯೋಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭೇಟಿಗೆ ತೆರಳಿತ್ತು. ಘಟಾನುಘಟಿ ನಾಯಕರೇ ಉಕ್ಕಿನ ಮಹಿಳೆ ವಿರುದ್ಧ ನಿಂತು ಮಾತನಾಡಲು ಹೆದರುತ್ತಿದ್ದ ಸಂದರ್ಭದಲ್ಲಿ ಡಾ. ಸಂಪತ್ಕುಮಾರ್ ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು ಎಂದು ಕಾಟ್ಕರ್ ತಿಳಿಸಿದ್ದಾರೆ.
ಡಾ. ಸಂಪತ್ಕುಮಾರ್ ಶಿವಣಗಿ ಅವರು 2005-2008ರವರೆಗೆ ಮೂರು ವರ್ಷ ಅಮೆರಿಕ ಸರ್ಕಾರದ ಆರೋಗ್ಯ ಮತ್ತು ಮಾನವಿಕ ಸೇವೆಗಳ ಕಾರ್ಯದರ್ಶಿ ಸಲಹೆಗಾರರಾಗಿದ್ದರು. ಅಮೆರಿಕದ ಭಾರತೀಯ ವೈದ್ಯರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಹೀಗೆ ಅನೇಕ ಜವಾಬ್ದಾರಿ ನಿರ್ವಹಿಸಿ ಅಮೆರಿಕದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಡಾ. ಸಂಪತ್ಕುಮಾರ್ ಶಿವಣಗಿ ರಸ್ತೆ: ಅಮೆರಿಕದ ಆರೋಗ್ಯ ಕ್ಷೇತ್ರಕ್ಕೆ ಇವರು ಅದ್ಭುತ ಕೊಡುಗೆ ನೀಡಿದ್ದಾರೆ. ಅಲ್ಲಿನ ಆರೋಗ್ಯ ಕ್ಷೇತ್ರ ಸುಧಾರಿಸುವ ಜೊತೆಗೆ ಹೊಸ ಯೋಜನೆಗಳಿಂದ ಬದಲಾವಣೆಯ ಗಾಳಿಯನ್ನೆ ಬೀಸಿದ್ದಾರೆ. ಅವರ ಕೊಡುಗೆಯನ್ನು ಗುರುತಿಸಿದ ಅಮೆರಿಕ ಸರ್ಕಾರವು ಮಿಸ್ಸಿಸಿಪ್ಪಿಯ ಒಂದು ರಸ್ತೆಗೆ "ಡಾ. ಸಂಪತ್ಕುಮಾರ್ ಶಿವಣಗಿ ಲೇನ್" ಎಂದು ಹೆಸರಿಟ್ಟು ಗೌರವಿಸಿರುವುದು ಬೆಳಗಾವಿ, ಕರ್ನಾಟಕ ಮತ್ತು ಇಡೀ ಭಾರತ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ವೈಟ್ ಹೌಸ್ನಲ್ಲಿ ದೀಪಾವಳಿ : ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದಾಗ ಅಮೆರಿಕದ ವೈಟ್ ಹೌಸ್ನಲ್ಲಿ ದೀಪಾವಳಿ ಹಬ್ಬ ಆಚರಿಸುವಲ್ಲಿ ಡಾ. ಶಿವಣಗಿ ಯಶಸ್ವಿಯಾಗಿದ್ದರು. ಅಂದು ಬುಷ್ ಅವರು 250 ಅನಿವಾಸಿ ಗಣ್ಯ ಭಾರತೀಯರನ್ನು ವೈಟ್ ಹೌಸ್ಗೆ ಆಹ್ವಾನಿಸಿ, ಹೊಸ ಬಟ್ಟೆ ತೊಟ್ಟು, ದೀಪ ಬೆಳಗಿಸಿ ಅವರೊಂದಿಗೆ ಸಂಭ್ರಮಿಸಿದ್ದರು. ಇನ್ನು ಜಾಕ್ ಸನ್ದಲ್ಲಿ ಹಿಂದೂ ದೇವಾಲಯವೊಂದನ್ನ ಡಾ. ಸಂಪತ್ಕುಮಾರ್ ಕಟ್ಟಿಸಿದ್ದಾರೆ.
"ಪ್ರವಾಸಿ ಭಾರತೀಯ ಸಮ್ಮಾನ್" ಪ್ರಶಸ್ತಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಅವರಿಗೆ ಡಾ. ಶಿವಣಗಿ ಆಪ್ತರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿ ಅವರ ಸಂಪುಟದ ಹಲವು ಸಚಿವರ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರವು "ಪ್ರವಾಸಿ ಭಾರತೀಯ ಸಮ್ಮಾನ್" ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪದ್ಮಶ್ರೀಗೆ ಸಮಾನವಾದ ಪ್ರಶಸ್ತಿ. ಅಮೆರಿಕಾದಲ್ಲೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಈ ಎಲ್ಲಾ ವಿಷಯಗಳನ್ನು ಡಾ. ಸರಜೂ ಕಾಟ್ಕರ್ ಸಂಪತ್ ಕುಮಾರ್ ಅವರ ಕುರಿತು ಬರೆದಿರುವ "ಅಮೆರಿಕದ ಭಾರತೀಯ ಸಾಂಸ್ಕೃತಿಕ ರಾಯಭಾರಿ" ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಈ ಟಿವಿ ಜತೆ ತಮ್ಮ ಅನುಭವ ಹಂಚಿಕೊಂಡ ಸಂಪತ್ ಕುಮಾರ್: ಈಟಿವಿ ಭಾರತದೊಂದಿಗೆ ಡಾ. ಸಂಪತ್ ಕುಮಾರ್ ಶಿವಣಗಿ ಮಾತನಾಡಿ, ಅಮೆರಿಕ ನನ್ನ ಕರ್ಮಭೂಮಿ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ನನ್ನ ಜನ್ಮಭೂಮಿ. ನನ್ನ ನರನಾಡಿಗಳಲ್ಲಿನ ಪ್ರತಿ ಕಣ ಕಣಗಳಲ್ಲಿ ನನ್ನ ತಾಯ್ನಾಡು ತುಂಬಿದೆ. ಭಾರತ ನನಗೆ ಹೃದಯವನ್ನು ಕೊಟ್ಟಿದೆ. ಅದಕ್ಕೆ ಪರ್ಯಾಯವಾಗಿ ನಾನು ನನ್ನ ಜೀವ ಕೊಡಲು ಸಿದ್ಧ. ಹಾಗಾಗಿ, ತಾಯ್ನಾಡಿಗೆ ಏನಾದರೂ ಕಾಣಿಕೆ ನೀಡಬೇಕೆಂದು ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಹಣ ನೀಡಿದ್ದೇನೆ. ಮೊದಲು ಅಥಣಿಯಲ್ಲೇ ಕ್ಯಾನ್ಸರ್ ಆಸ್ಪತ್ರೆ ಕಟ್ಟುವ ಇರಾದೆ ಹೊಂದಿದ್ದೆವು. ಅದು ಸಾಧ್ಯವಾಗಲಿಲ್ಲ. ಹಾಗಾಗಿ, ಇಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಆಸ್ಪತ್ರೆ ಹೊಂದಿದ್ದು, ಬಡ ಜನರಿಗೆ ಇದು ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಿಂಗರಾಜ ದೇಸಾಯಿ ಅವರೇ ಇಷ್ಟಕ್ಕೆಲ್ಲ ಪ್ರೇರಣೆ : ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮ ಸಂಸ್ಥಾನದ ಇಡೀ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದವರು. ಅವರಿಂದ ಪ್ರೇರಣೆ ಪಡೆದು ನಾನು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಎಂದು ಡಾ. ಸಂಪತ್ ಕುಮಾರ್ ಶಿವಣಗಿ ಹೇಳಿದರು.
250 ರೂಪಾಯಿಗೆ ಸ್ಟೈಫಂಡ್ ಏರಿಸಿದ್ದರು : ಹೌಸ್ ಸರ್ಜನ್ಗಳಿಗೆ ಸರ್ಕಾರ ನೀಡುತ್ತಿದ್ದ 25 ರೂ. ಸ್ಟೈಫಂಡ್ ಏರಿಸುವಂತೆ ಪ್ರತಿಭಟನೆ ಮಾಡಿದ್ದೆವು. ಈ ವೇಳೆ ಆರೋಗ್ಯ ಸೇವೆ ಸ್ಥಗಿತಗೊಂಡು ರೋಗಿಗಳು ಪರದಾಡಿದರು. ಪ್ರತಿಭಟನಾ ಸ್ಥಳದಲ್ಲಿ ತುರ್ತು ಸೇವೆ ಅಷ್ಟೇ ನೀಡಲಾಗುತ್ತಿತ್ತು. ಪರಿಸ್ಥಿತಿ ಗಂಭೀರತೆ ಅರಿತ ಅಂದಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ನನ್ನ ನೇತೃತ್ವದ ನಿಯೋಗ ಬಂದು ಭೇಟಿ ಮಾಡುವಂತೆ ತಿಳಿಸಿದರು. ಕೊನೆಗೆ ಸಭೆಯಲ್ಲಿ ಸ್ಪೈಫಂಡ್ 250 ರೂಪಾಯಿಗೆ ಏರಿಸುವುದಾಗಿ ಮುಖ್ಯಮಂತ್ರಿಗಳು ಒಪ್ಪಿದ ಬಳಿಕವೇ ಕರ್ತವ್ಯಕ್ಕೆ ಹಾಜರಾಗಿದ್ದೆವು ಎಂದು ಸ್ಮರಿಸಿಕೊಂಡರು.
ಇದನ್ನೂ ಓದಿ : ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಶರದ್ ಪವಾರ್ ಭೇಟಿ - Sharad Pawar - SHARAD PAWAR