ಬೆಂಗಳೂರು: ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಮೇಲೆ ಪರಿಶೀಲನಾ ಕಾರ್ಯ ಮುಂದುವರೆಸಿರುವ ಲೋಕಾಯುಕ್ತ ಹಾಗೂ ಅಧಿಕಾರಿಗಳ ತಂಡ, ಸೋಮವಾರ ಕಾನೂನು ಹಾಗೂ ಮಾಪನ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಇತ್ತೀಚೆಗೆ ನಗರದ 54 ಬಿಬಿಎಂಪಿ ಕಚೇರಿಗಳ ಮೇಲೆ ತಪಾಸಣೆ ನಡೆಸಿ ನಡೆಯುತ್ತಿದ್ದ ಲೋಪದೋಷಗಳನ್ನು ಪತ್ತೆ ಹಚ್ಚಿದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಒಳಗೊಂಡ 40 ಜನರ ತಂಡವು, ಆಲಿ ಆಸ್ಕರ್ ರಸ್ತೆಯಲ್ಲಿರುವ ಮಾಪನ ಇಲಾಖೆಯ ಪ್ರಧಾನ ಕಚೇರಿ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಮಹಿಳಾ ಸಿಬ್ಬಂದಿಯ ಫೋನ್-ಪೇ ಪರಿಶೀಲನೆ : ಮಾಪನ ಇಲಾಖೆ ಮೇಲೆ ಮಧ್ಯಾಹ್ನ ಲೋಕಾಯುಕ್ತ ಬಿ.ಎಸ್. ಪಾಟೀಲ್ ನೇತೃತ್ವದ 36 ತಂಡವು ದಿಢೀರ್ ತೆರಳಿ ಪರಿಶೀಲನೆ ನಡೆಸಿತು. ಕಚೇರಿಯಲ್ಲಿರುವ ಹಾಜರಾತಿ ಪುಸ್ತಕ ಸೇರಿದಂತೆ ವಿವಿಧ ರಿಜಿಸ್ಟ್ರರ್ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ಪುಸ್ತಕದಲ್ಲಿ ಇವತ್ತಿನ ಹಾಜರಾತಿ ಜೊತೆಗೆ ನಾಳೆ ಹಾಜರಾತಿ ಹಾಕಿರುವುದನ್ನ ಕಂಡು ಗರಂ ಆದರು. ನಾಳೆಯದನ್ನ ''ಇವತ್ತೇ ಹಾಕುತ್ತೀಯಾ?, ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೆಯಾ?'' ಎಂದು ಕೆಲಸ ಬಿಟ್ಟಿದವರ ಹೆಸರನ್ನ ಉಲ್ಲೇಖವಾಗಿರುವುದನ್ನ ಕಂಡು ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
''ಕಚೇರಿಗೆ ತಡವಾಗಿ ಬಂದಿದ್ದ ಮಹಿಳಾ ಸಿಬ್ಬಂದಿ ಜ್ಯೋತಿ ಎಂಬುವರನ್ನ ಇಬ್ಬರು ಉಪಲೋಕಾಯುಕ್ತರು ಪ್ರಶ್ನಿಸಿದರು. ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಏಳು ವರ್ಷದಿಂದ ಎಂದು ಉತ್ತರಿಸಿದ ಮಹಿಳೆಯನ್ನ ಏಳು ವರ್ಷಗಳಿಂದ ಯಾಕೆ ವರ್ಗಾವಣೆಯಾಗಿಲ್ಲ'' ಎಂದು ಉಪಲೋಕಾಯುಕ್ತರು ಮರುಪ್ರಶ್ನಿಸಿದರು. ಅವರ ಬಳಿಯಿದ್ದ ಮೊಬೈಲ್ ಪಡೆದು ಫೋನ್-ಪೇ ಪರಿಶೀಲಿಸಿದಾಗ ಕಳೆದ ಮೂರು ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದನ್ನ ಕಂಡು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ''ಮಹಿಳಾ ಸಿಬ್ಬಂದಿ ಬೀದರ್ನಲ್ಲಿರುವ ಮನೆ ಮಾರಾಟದಿಂದ ಬಂದ ಹಣವೆಂದು ಸಮಜಾಯಿಷಿ ನೀಡಿದರು. ಗಂಡನ ಬದಲು ತನಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದರು. ಕಚೇರಿಯಲ್ಲಿ ಕೆಲಸ ಮಾಡುವಾಗ ಹಣ ವರ್ಗಾವಣೆಯಾಗುವ ಮೇಲಾಧಿಕಾರಿಗಳ ಅನುಮತಿ ಪಡೆದುಕೊಂಡಿದ್ದೀರಾ'' ಎಂಬ ಪ್ರಶ್ನೆಗೆ ಮಹಿಳೆ ಉತ್ತರಿಸದೆ ಪೇಚಾಡಿದರು.
ತರಾಟೆಗೆ ತೆಗೆದುಕೊಂಡ ಇಬ್ಬರು ಉಪಲೋಕಾಯುಕ್ತರು : ಕಚೇರಿಯ ರಿಜಿಸ್ಟ್ರರ್ಗಳನ್ನ ಪರಿಶೀಲಿಸುವಾಗ ಜಪ್ತಿ ಅಥವಾ ಸೀಜ್ ಮಾಡಲಾದ ವಸ್ತುಗಳಿಟ್ಟಿರುವ ರೂಮ್ಗಳಿಗೆ ಬೀಗ ಹಾಕಿರುವುದನ್ನ ಪ್ರಶ್ನಿಸಿದರು. "ಕೊಠಡಿಗಳಿಗೆ ಯಾಕೆ ಬೀಗ ಹಾಕಿದ್ದೀರಾ? ಫೀಲ್ಡ್ ವರ್ಕ್ಗೆ ಹೋಗಿದ್ದರೆ ಫೈಲ್ನಲ್ಲಿ ನಮೂದು ಮಾಡಬೇಕಿತ್ತು. ಅಲ್ಲದೆ ಈ ಬಗ್ಗೆ ಸರಿಯಾದ ರಿಜಿಸ್ಟ್ರರ್ ಯಾಕೆ ಮಾಡಿಲ್ಲ? ಬೀಗ ಹಾಕಿ ಹೊರಗೆ ಹೋಗುವ ಅಧಿಕಾರಿಗಳಿಗೆ ಅನುಮತಿ ನೀಡಿದ್ದು ಯಾರು? ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ಕಚೇರಿ ಬಯೋಮೆಟ್ರಿಕ್ ಹಾಗೂ ಸಿಸಿಟಿವಿ ಪರಿಶೀಲಿಸಿದಾಗ ಅಧಿಕಾರಿ ಹಾಗೂ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದಿರುವುದು ಕಂಡು ಬಂತು. ಸುದ್ದಿ ತಿಳಿದು ಹೊರ ಹೋಗಿದ್ದ ಅಧಿಕಾರಿಗಳಿಗೂ ಚಳಿ ಬಿಡಿಸಿದ ಇಬ್ಬರು ಉಪಲೋಕಾಯುಕ್ತರು, ಮೊಮೆಂಟ್ ರಿಜಿಸ್ಟರ್ ಯಾಕೆ ನಿರ್ವಹಣೆ ಮಾಡಿಲ್ಲ? ಯಾವಾಗ ಹಾಗೂ ಹೆಂಗೇ ಬೇಕಾದರೂ ಹೋಗಬಹುದಾ? ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಲೋಕಾಯುಕ್ತರು ಹೇಳಿದ್ದೇನು? ಪರಿಶೀಲನೆ ಮುಕ್ತಾಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ಬಿ.ಎಸ್. ಪಾಟೀಲ್ ''ಬೆಂಗಳೂರಿನ ಮಾಪನ ಇಲಾಖೆಯ ಕಚೇರಿಯಲ್ಲಿ 34 ತಂಡಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿವೆ. ಕಚೇರಿಯ ಬೇರೆ ಬೇರೆ ಶಾಖಾ ಕಚೇರಿಗಳಲ್ಲಿ ತೆರಳಿ ಪ್ರತ್ಯೇಕ ಆರು ತಂಡಗಳು ಪರಿಶೀಲಿಸಿವೆ. ಭ್ರಷ್ಟಾಚಾರ ಹಾಗೂ ಸ್ವಜನಪಾಕ್ಷಪಾತ ಧೋರಣೆಗಳ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಲೋಕಾಯುಕ್ತಕ್ಕೆ ದೂರುಗಳು ಬಂದಿದ್ದವು. ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಂದಾಗ ಕಚೇರಿಯ ಮೂರು ಮಹಡಿ ಬಾಗಿಲುಗಳಿಗೆ ಬೀಗ ಹಾಕಿಕೊಂಡಿದ್ದರು. ಸ್ಥಳದಲ್ಲಿ ಒಬ್ಬ ಅಧಿಕಾರಿಯೂ ಇರಲಿಲ್ಲ. 4ನೇ ಮಹಡಿಯಲ್ಲಿದ್ದ ಕಂಟ್ರೋಲರ್ ಒಬ್ಬರನ್ನ ಪ್ರಶ್ನಿಸಿದಾಗ ನನಗೆ ಯಾರೂ ಮಾಹಿತಿ ನೀಡಿಲ್ಲ. ಮೂರು ಮಹಡಿಯ ಬಾಗಿಲು ಲಾಕ್ ಮಾಡಿಕೊಂಡು ಯಾವತ್ತು ಹೋಗಿಲ್ಲ. ಬೀಗ ಹಾಕಿರುವ ಬಗ್ಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಕಾರಣವಿಲ್ಲದೆ ಅಧಿಕಾರಿಗಳು ಕಚೇರಿಯಿಂದ ಹೊರಹೋಗಿರುವುದು ಕಂಡುಬಂದಿದೆ. ಕಚೇರಿಯಿಂದ ಯಾರೇ ಹೋಗಬೇಕಾದರೂ ಪ್ರತ್ಯೇಕ ರಿಜಿಸ್ಟ್ರರ್ ನಿರ್ವಹಿಸದೆ ಅಥವಾ ಕಂಟ್ರೋಲರ್ಗೆ ಮಾಹಿತಿ ನೀಡದಿರುವುದು ಕಂಡುಬಂದಿದೆ. ಹಣ ವರ್ಗಾವಣೆ ಹಾಗೂ ಕಚೇರಿಯಲ್ಲಿರುವ ಹಣದ ಬಗ್ಗೆ ಸೂಕ್ತ ಸಮಜಾಯಿಷಿ ನೀಡಿಲ್ಲ. ಕಾಲ-ಕಾಲಕ್ಕೆ ಪೆಟ್ರೋಲ್ ಬಂಕ್ಗಳು ಹಾಗೂ ಟ್ರೇಡರ್ಸ್ ಶಾಪ್ಗಳ ಮೇಲೆ ಸಕಾಲಕ್ಕೆ ತಪಾಸಣೆ ಮಾಡಬೇಕಿದ್ದರೂ ಈ ಬಗ್ಗೆ ತನಿಖೆ ನಡೆಸದಿರುವುದು ಕಂಡುಬಂದಿದೆ.
ಜಾಯಿಂಟ್ ಕಂಟ್ರೋಲರ್ ರಜೆ ಹಾಕಿದಾರೆ. ಆದರೆ, ರಜೆ ಚೀಟಿ ಕೂಡ ಕೊಟ್ಟಿಲ್ಲ. ಎಲ್ಲರನ್ನೂ ಕರೆಸಿ ಅವರ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ. ಕೆಲವರು ಮೊಬೈಲ್ನಲ್ಲಿ 1 ಲಕ್ಷದವರೆಗೂ ಹಣ ವರ್ಗಾವಣೆ ಮಾಡಿದ್ದು ಈ ಬಗ್ಗೆ ವಿವರ ನೀಡುವಂತೆ ಕೇಳಿದ್ದೇನೆ. ನಾಳೆ ಹಾಗೂ ನಾಡಿದ್ದರ ಹಾಜರಾತಿ ಇಂದೇ ಹಾಕಿದ್ದಾರೆ. ಸಂಗ್ರಹಿಸಬೇಕಿದ್ದ ಹಣವನ್ನ ಮುಂಗಡವಾಗಿ ರಿಜಿಸ್ಟರ್ನಲ್ಲಿ ಬರೆದಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ತಿಳಿಸಿದರು.
ಇದನ್ನೂ ಓದಿ: |