ಬೆಂಗಳೂರು: 2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯರನ್ನು ನೋಂದಾಯಿಸಲು/ನವೀಕರಣಗೊಳಿಸುವ ಸಲುವಾಗಿ ಅವಧಿಯನ್ನು ಫೆ.1 ರಿಂದ ಮಾರ್ಚ್ 31ರ ವರೆಗೆ ವಿಸ್ತರಿಸಿ ಆದೇಶಿಸಿದೆ.
ಯಶಸ್ವಿನಿ ಯೋಜನೆ ರಾಜ್ಯಾದ್ಯಂತ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್-2024 ಮತ್ತು ಜನವರಿ-2025ರ ತಿಂಗಳುಗಳಲ್ಲಿ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ/ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ಇಲಾಖೆಯ ಕ್ಷೇತ್ರ ಸಿಬ್ಬಂದಿ/ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದರಿಂದಾಗಿ ಯಶಸ್ಸಿನಿ ನೋಂದಣಿಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ.
ನಿಗದಿಪಡಿಸಿರುವ ಗುರಿಯ ಪೈಕಿ ಇಲ್ಲಿಯವರೆಗೆ ಸುಮಾರು 10ಲಕ್ಷ ಸದಸ್ಯರ ನೋಂದಣಿ ಮಾತ್ರವಾಗಿದ್ದು, ಇನ್ನೂ ಅನೇಕ ಸದಸ್ಯರು ನೋಂದಾಯಿಸಿಕೊಳ್ಳಲು ಆಸಕ್ತರಾಗಿರುವುದರಿಂದ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಲು 2024-25ನೇ ಸಾಲಿನ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ/ನವೀಕರಣ ಅವಧಿಯನ್ನು 1-2-2025 ರಿಂದ 31-03-2025ರ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯತ್ವ ನೋಂದಣಿ ಪ್ರಾರಂಭಿಸಲು ಕೆಲವು ಷರತ್ತುಗಳೊಂದಿಗೆ ಆದೇಶ ಹೊರಡಿಸಲಾಗಿತ್ತು. ಮೊದಲಿಗೆ ಆದೇಶದಲ್ಲಿ ನೋಂದಣಿ ಅವಧಿಯನ್ನು 1-12-2024 ರಿಂದ 31-12-2024 ರವರೆಗೆ ನಿಗದಿಪಡಿಸಲಾಗಿತ್ತು. ಬಳಿಕ ನೋಂದಣಿ ಅವಧಿಯನ್ನು 1-01-2025ರಿಂದ 31-01-2025ರ ವರೆಗೆ ವಿಸ್ತರಿಸಿ ಆದೇಶಿಸಲಾಗಿತ್ತು. ಈಗ ಮತ್ತೊಮ್ಮೆ ಸದಸ್ಯತ್ವ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ: ಯಶಸ್ವಿನಿ ಯೋಜನೆಗೆ ಆದಾಯ ಮಿತಿಗೊಳಿಸಿದ ಸರ್ಕಾರ; ನೋಂದಣಿಗೆ ಡಿ.31ರವರೆಗೆ ಅವಕಾಶ