ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ದರೋಡೆ ಪ್ರಕರಣದ ಮುಖ್ಯ ಕಿಂಗ್‌ಪಿನ್ ತಿರುನೆಲ್ವೇಲಿಯ ಮುರುಗಂಡಿ ಥೆವರ್ (36), ಮುಂಬೈ ಯೊಸುವ ರಾಜೇಂದ್ರನ್ (35), ಮುಂಬೈನ ಕನ್ನನ್ ಮಣಿ (36) ಬಂಧಿತ ಆರೋಪಿಗಳು. ಮುಂಬೈ ಮೂಲದ ಗ್ಯಾಂಗ್ ಹಾಗೂ ತಮಿಳುನಾಡು ಮೂಲದ ದರೋಡೆಕೋರರಿಂದ ಈ ಕೃತ್ಯ ನಡೆದಿತ್ತು. ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ನಡೆಸಲೆಂದೇ ಇವರೆಲ್ಲರೂ ಮಂಗಳೂರಿಗೆ ಬಂದಿದ್ದರು. ದರೋಡೆ ಬಳಿಕ ಕೇರಳದಿಂದ ತಮಿಳುನಾಡಿಗೆ ತಂಡ ಪರಾರಿಯಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಜಾಡು ಹಿಡಿದ ಮಂಗಳೂರು ಪೊಲೀಸರು, ಮುಂಬೈಯಿಂದ ಬಂದ ಮಾಹಿತಿ ಕಲೆ ಹಾಕಿ ತಮಿಳುನಾಡಿನ ತಿರುವನಲ್ವೇಲಿಯಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಫಿಯೆಟ್ ಕಾರ್, ತಲ್ವಾರ್, ಪಿಸ್ತೂಲ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಕೃತ್ಯ ಎಸಗಲು ಮಹಾರಾಷ್ಟ್ರ ಮೂಲದ ಫಿಯೆಟ್ ಕಾರನ್ನು ಬಳಸಲಾಗಿತ್ತು. ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ತನಿಖೆ ಮುಂದುವರೆದಿದೆ ಎಂದು ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಘಟನೆ ವಿವರ : ಜನವರಿ 17ರಂದು ಮಂಗಳೂರು ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಹಾಡಹಗಲೇ ಮುಸುಕುಧಾರಿಗಳು ದರೋಡೆ ನಡೆಸಿ ಪರಾರಿಯಾಗಿದ್ದರು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30ರ ನಡುವೆ ಶಸ್ತ್ರಸಜ್ಜಿತ ತಂಡ ದರೋಡೆ ನಡೆಸಿತ್ತು.
ದರೋಡೆಕೋರರ ತಂಡವು ಮುಖಕ್ಕೆ ಮಾಸ್ಕ್ ಧರಿಸಿ, ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್‌ಗೆ ಪ್ರವೇಶಿಸಿತ್ತು. ಈ ವೇಳೆ ಐವರು ಉದ್ಯೋಗಿಗಳು ಬ್ಯಾಂಕಿನಲ್ಲಿದ್ದರು. ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ದರೋಡೆ ಮಾಡಿದ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.
ಇದನ್ನೂ ಓದಿ: ಮೈಸೂರು: ಹಾಡಹಗಲೇ ಕಾರು ಕದ್ದೊಯ್ದ ದರೋಡೆಕೋರರು; ತನಿಖೆಗೆ 3 ಪೊಲೀಸ್ ತಂಡ ರಚನೆ