ಬೆಳಗಾವಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.
ಶೀಘ್ರವೇ ಗುಣಮುಖರಾಗಿ, ಮತ್ತೆ ಜನಸೇವೆಗೆ ಮರಳುವಂತೆ ಈ ವೇಳೆ ಮುಖ್ಯಮಂತ್ರಿ ಅವರು ಹಾರೈಸಿದರು. ಅಲ್ಲದೇ ಧೈರ್ಯ ತುಂಬಿದರು. ಈ ವೇಳೆ ಸಚಿವರಾದ ಹೆಚ್. ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್ ಸೇರಿ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಸಚಿವ ಈಶ್ವರ್ ಖಂಡ್ರೆ, ಶಾಸಕರಾದ ನಯನಾ ಮೋಟಮ್ಮ, ಅನಿಲ್ ಚಿಕ್ಕಮಾದು, ಪ್ರದೀಪ ಈಶ್ವರ್ ಸೇರಿ ಮತ್ತಿತರರು ಬೆಳಗ್ಗೆಯಿಂದ ಒಬ್ಬೊಬ್ಬರಾಗಿ ಆಗಮಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯದ ಕುರಿತು ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಬೆಳಗಾವಿಯ ವಿಜಯ ಆಸ್ಪತ್ರೆಗೆ ಭೇಟಿ ನೀಡಿ, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ. pic.twitter.com/Wd2DOgUxXq
— Siddaramaiah (@siddaramaiah) January 20, 2025
ಕಾರು ಅಪಘಾತ ವಿವರ : ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿದ್ದ ಸರ್ಕಾರಿ ಕಾರು ಅಪಘಾತಕ್ಕೀಡಾದ ಘಟನೆ ಮಕರ ಸಂಕ್ರಾಂತಿ ಹಬ್ಬದ (ಜನವರಿ 14) ಬೆಳಗಿನ ಜಾವ ಸುಮಾರು 5 ಗಂಟೆಗೆ ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಸಂಭವಿಸಿತ್ತು. ಘಟನೆಯಲ್ಲಿ ಹೆಬ್ಬಾಳ್ಕರ್, ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.
ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಬೆನ್ನು ಮೂಳೆಗೆ ಭಾರಿ ಪೆಟ್ಟುಬಿದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನರಾಜ ಹಟ್ಟಿಹೊಳಿ ಮತ್ತು ಕಾರು ಚಾಲಕ, ಗನ್ಮ್ಯಾನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಅದೇ ದಿನ ಡಿಸ್ಚಾರ್ಜ್ ಆಗಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಶಿವಪ್ರಸಾದ ಗಂಗಾಧರಯ್ಯ ಅವರು ದೂರು ನೀಡಿದ್ದಾರೆ. ದೂರಿನ ಪ್ರಕಾರ ಆ ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ: ತೊಗರಿಗೆ ರಾಜ್ಯ ಸರ್ಕಾರದಿಂದ ಕ್ವಿಂಟಾಲ್‌ಗೆ ಹೆಚ್ಚುವರಿ ₹450 ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್