ಭುವನೇಶ್ವರ(ಒಡಿಶಾ): ಚಿಲ್ಕಾದಲ್ಲಿ ವಿಶಿಷ್ಟ ಆಕಾರದ ಕೊಕ್ಕ ಮತ್ತು ಉದ್ದವಾದ ಕಾಲುಗಳೊಂದಿಗೆ ಗ್ರೇಟರ್ ಫ್ಲೆಮಿಂಗೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.
ಫ್ಲೆಮಿಂಗೋಗಳು ಪೂರ್ವ ಕರಾವಳಿಯ ಉಪ್ಪುನೀರಿನ ಸರೋವರವಾದ ಚಿಲ್ಕಾಕ್ಕೆ ಪ್ರತಿ ವರ್ಷ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಬಂದು ಏಪ್ರಿಲ್-ಮೇ ತಿಂಗಳಲ್ಲಿ ತಮ್ಮ ಸಂತಾನೋತ್ಪತ್ತಿ ನಡೆಸಲು ಹೊರಡುತ್ತವೆ. ಈ ಫ್ಲೆಮಿಂಗೋಗಳು ಚಿಲ್ಕಾಕ್ಕೆ ಎಲ್ಲಿಂದ ಬರುತ್ತವೆ ಎಂಬುದು ನಿಖರವಾಗಿ ತಿಳಿದಿಲ್ಲ. "ಫ್ಲೆಮಿಂಗೋ ನಗರ" ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಗುಜರಾತ್‌ನ ಗ್ರೇಟ್ ರಾನ್ ಆಫ್ ಕಚ್‌ನಿಂದ ಗ್ರೇಟರ್ ಫ್ಲೆಮಿಂಗೋ ತಳಿಗಳು ಚಳಿಗಾಲಕ್ಕೆ ಚಿಲ್ಕಾಗೆ ಬಂದಿರಬಹುದು.
ಫ್ಲೆಮಿಂಗೋ ಯಶಸ್ವಿಯಾಗಿ ಸೆರೆಹಿಡಿದು ಟ್ಯಾಗ್: ಬಿಎನ್ಹೆಚ್ಎಸ್ ಅಧ್ಯಯನಗಳ ಪ್ರಕಾರ, ಇರಾನ್, ಕಝಾಕಿಸ್ತಾನ್ ಮತ್ತು ಏಷ್ಯಾದ ಇತರ ಸಂತಾನೋತ್ಪತ್ತಿ ಸ್ಥಳಗಳಿಂದ ಕೂಡ ಫ್ಲೆಮಿಂಗೋಗಳು ಆಗಮಿಸುತ್ತಿರಬಹುದು. ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆಯ ಡಾ.ಆರ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಒಡಿಶಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಚಿಲ್ಕಾ ಡಬ್ಲ್ಯುಎಲ್ ವಿಭಾಗದ ಸಿಬ್ಬಂದಿ ಜನವರಿ 8 ಮತ್ತು 9 ರಂದು ಚಿಲ್ಕಾದ ನಲಬಾನಾದಲ್ಲಿ ಎರಡು ಗ್ರೇಟರ್ ಫ್ಲೆಮಿಂಗೋಗಳನ್ನು ಯಶಸ್ವಿಯಾಗಿ ಸೆರೆಹಿಡಿದು ಟ್ಯಾಗ್ ಮಾಡಿದ್ದಾರೆ.
ಸೌರಶಕ್ತಿ ಚಾಲಿತ GSM-GPS ಟ್ರಾನ್ಸ್‌ಮಿಟರ್ ಅಳವಡಿಕೆ: ಎರಡು ಫ್ಲೆಮಿಂಗೊಗಳಿಗೆ 30 ಗ್ರಾಂ ತೂಕದ ಸೌರಶಕ್ತಿ ಚಾಲಿತ GSM-GPS ಟ್ರಾನ್ಸ್‌ಮಿಟರ್ ಅನ್ನು ಅಳವಡಿಸಲಾಗಿದ್ದು, ಅದು ಪ್ರತಿ 10 ನಿಮಿಷಕ್ಕೊಮ್ಮೆ ಪಕ್ಷಿಗಳು ಇರುವ ಸ್ಥಳವನ್ನು ದಾಖಲಿಸುತ್ತದೆ.
ಈ ಸಾಧನವು ಚಳಿಗಾಲದಲ್ಲಿ ಚಿಲ್ಕಾದಲ್ಲಿ ಫ್ಲೆಮಿಂಗೊಗಳ ಚಲನವನ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಫ್ಲೆಮಿಂಗೋಗಳ ಆವಾಸಸ್ಥಾನ ನಿರ್ವಹಣೆ ಮತ್ತು ಸಂರಕ್ಷಣೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಲಾಖೆಗೆ ಸಹಾಯ ಮಾಡುತ್ತದೆ. ಈ ಪಕ್ಷಿಗಳು ಎಲ್ಲಿಂದ ಬರುತ್ತವೆ ಮತ್ತು ಅಲ್ಲಿಗೆ ಮರಳಿ ಹೋಗಲು ಪಕ್ಷಿಗಳು ಯಾವ ಮಾರ್ಗ ಅನುಸರಿಸುತ್ತವೆ ಎಂಬ ರಹಸ್ಯವನ್ನು ಸಹ ಇದು ಬಹಿರಂಗಪಡಿಸುತ್ತದೆ.
ಚಿಲ್ಕಾ ಪಕ್ಷಿ ಉತ್ಸವದ ವೇಳೆ ಮೊದಲ ಬಾರಿಗೆ ಟ್ರ್ಯಾಕಿಂಗ್: 5 ನೇ ರಾಷ್ಟ್ರೀಯ ಚಿಲ್ಕಾ ಪಕ್ಷಿ ಉತ್ಸವದ ಸಂದರ್ಭದಲ್ಲಿ ಚಿಲ್ಕಾದ ಗ್ರೇಟರ್ ಫ್ಲೆಮಿಂಗೋದ ಟ್ರ್ಯಾಕಿಂಗ್ ಅನ್ನು ಮೊದಲ ಬಾರಿಗೆ ಕೈಗೊಳ್ಳಲಾಯಿತು. ಈ ಉಪಕ್ರಮವು ಚಿಲ್ಕಾ ಸರೋವರದ ಪಕ್ಷಿಗಳ ಮೇಲ್ವಿಚಾರಣೆ ನಡೆಸಲು ದೀರ್ಘಕಾಲೀನ ಸಹಯೋಗಕ್ಕಾಗಿ ವನ್ಯಜೀವಿ ವಿಭಾಗ, ಒಡಿಶಾ ಅರಣ್ಯ ಇಲಾಖೆ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದ ಮಹತ್ವವನ್ನು ತಿಳಿಸುತ್ತದೆ.
ಇದನ್ನೂ ಓದಿ: ಹಕ್ಕಿಜ್ವರಕ್ಕೆ ತುತ್ತಾಗಿದ್ದ ಕೋಳಿ ತಿಂದು 3 ಹುಲಿ, ಚಿರತೆ ಸಾವು ಶಂಕೆ