ದುಬೈ:ಮೊದಲ ಪಂದ್ಯದಲ್ಲಿ ಸೋಲು ಕಂಡು ಟಿ-20 ವಿಶ್ವಕಪ್ನ ಗುಂಪು ಹಂತದಿಂದಲೇ ಹೊರಬೀಳುವ ಭೀತಿಯಲ್ಲಿದ್ದ ಭಾರತ ಇಂದು (ಭಾನುವಾರ) ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಮುಂದುವರೆದಿದೆ. ಮೊದಲ ಜಯದ ಮೂಲಕ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮಹಿಳೆಯರು ಸಾಧಾರಣ ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 105 ರನ್ ಗಳಿಸಿತು. ಗೆಲ್ಲುವ ಛಲದೊಂದಿಗೆ ಗುರಿ ಬೆನ್ನತ್ತಿದ ಭಾರತದ ಮಹಿಳೆಯರು ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 18.5 ಓವರ್ಗೆ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಸಾಧಾರಣ ಗುರಿ ಇದ್ದರೂ ಭಾರತ ವನಿತೆಯರು ಉತ್ತಮ ಆರಂಭ ಪಡೆಯಲಿಲ್ಲ. ಶೆಫಾಲಿ ವರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಉಪ ನಾಯಕಿ ಸ್ಮೃತಿ ಮಂಧನಾ 7 ರನ್ಗೆ ವಿಕೆಟ್ ನೀಡಿದರು. ಈ ವೇಳೆ ತಂಡದ ಮೊತ್ತ 18 ಆಗಿತ್ತು. ಮೂರನೇ ಸ್ಥಾನಕ್ಕೆ ಬಡ್ತಿ ಪಡೆದ ಜೆಮಿಮಾ ರೋಡ್ರಿಗ್ಸ್, ಶೆಫಾಲಿ ಜೊತೆಗೂಡಿ ಎಚ್ಚರಿಕೆಯ ಆಟವಾಡಿದರು. ಇಬ್ಬರೂ ಸೇರಿ 43 ರನ್ ಜೊತೆಯಾಟ ಆಡಿದರು.
ಶೆಫಾಲಿ 35 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಜೆಮಿಮಾ 28 ಎಸೆತಗಳಲ್ಲಿ 23 ರನ್ ಮಾಡಿದರು. 29 ರನ್ ಮಾಡಿದ್ದಾಗ ನಾಯಕಿ ಹರ್ಮನ್ಪ್ರೀತ್ ಕೌರ್ ಗೆಲುವಿನ ಕೊನೆಯಲ್ಲಿ ಗಾಯಕ್ಕೀಡಾದರು. ದೀಪ್ತಿ ಶರ್ಮಾ ಮತ್ತು ಸಂಜನಾ ಗೆಲುವಿನ ಶಾಸ್ತ್ರ ಮುಗಿಸಿದರು.