ಪ್ಯಾರಿಸ್/ನವದೆಹಲಿ:ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ. ಮಂಗಳವಾರ ನಡೆದ 50 ಕೆಜಿ ಸ್ಪರ್ಧೆಯ ಮಹಿಳೆಯರ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ ಭಾರತದ ವಿನೇಶಾ 5-0 ಅಂತರದಲ್ಲಿ ಜಯಗಳಿಸಿದರು.
ಈ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಮತ್ತು ಎರಡನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಸುಶೀಲ್ ಕುಮಾರ್ ಅವರು ಫೈನಲ್ ತಲುಪಿದ್ದರು.
ವಿನೇಶ್ ಪೋಗಟ್ ಅವರು ಆರಂಭದಿಂದಲೇ ಎದುರಾಳಿಯ ವಿರುದ್ಧ ಬಿಗಿಪಟ್ಟು ಹಾಕಿದರು. ಕ್ಯೂಬಾದ ಕುಸ್ತಿಪಟು ಭಾರತದ ಪೈಲ್ವಾನ್ ಮುಂದೆ ಮಿಸುಕಾಡಲು ಆಗಲಿಲ್ಲ. ಇದರಿಂದ ಸತತ ಅಂಕ ಪಡೆಯುತ್ತಾ ಸಾಗಿದ ವಿನೇಶ್ 5 ಅಂಕ ಪಡೆದು ಏಕಮೇವಾಗಿ ಜಯ ಸಾಧಿಸಿದರು.
ವಿನೇಶ್ ಪೋಗಟ್ ಭಾರತದ ಸಿಂಹಿಣಿ:ಕುಸ್ತಿಯ ಅಖಾಡದಲ್ಲಿ ವಿಶ್ವದ ಖ್ಯಾತ ಜಟ್ಟಿಗಳಿಗೆ ಮಣ್ಣು ಮುಕ್ಕಿಸುತ್ತಿರುವ ಭಾರತದ ಪೈಲ್ವಾನ್ ಬಗ್ಗೆ ಪುರುಷರ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿನೇಶ್ 'ಭಾರತದ ಸಿಂಹಿಣಿ' ಎಂದು ಬಣ್ಣಿಸಿದ್ದಾರೆ.