ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ:ಸಿಡಿಲಬ್ಬರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಯುವ ದಾಂಡಿಗ ತಿಲಕ್ ವರ್ಮಾ ಅವರು ಚುಟುಕು ಸರಣಿಯಲ್ಲಿ ಲೆಜೆಂಡರಿ ಕ್ರಿಕೆಟ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ವರ್ಮಾ ಈ ಮೈಲಿಗಲ್ಲು ಸಾಧಿಸಿದ್ದಾರೆ.
ಒಟ್ಟು ನಾಲ್ಕು ಪಂದ್ಯಗಳ ಟಿ20 ಸರಣಿ ಇದಾಗಿತ್ತು. ಈ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ತಿಲಕ್ ವರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದರು. ಅದರಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಕೂಡ ಅವರು ಪುಡಿಗಟ್ಟಿದರು.
ನಾಲ್ಕನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಕೇವಲ 47 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ, 9 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳು ಸೇರಿದಂತೆ 255.32 ಭಯಾನಕ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 120 ರನ್ ಗಳಿಸಿದರು. ಇದಕ್ಕೂ ಮುನ್ನ 3ನೇ ಟಿ20 ಪಂದ್ಯದಲ್ಲಿ ಅಜೇಯ 107 ರನ್ ಸಿಡಿಸಿದ್ದರು. ಈ ಎರಡು ಭರ್ಜರಿ ಶತಕಗಳೊಂದಿಗೆ ಸೌತ್ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ತಿಲಕ್ ವರ್ಮಾ 280 ರನ್ ಕಲೆಹಾಕಿದ್ದಾರೆ. 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ಪಡೆದ ಅವರು ಇದರೊಂದಿಗೆ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ರನ್ ಮಿಷನ್ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿತ್ತು. 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಒಟ್ಟು 231 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. 115ರ ಸರಾಸರಿಯಲ್ಲಿ 147.13 ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಮೂರು ಅರ್ಧ ಶತಕ ಬಾರಿಸಿದ್ದರು. ಇದೀಗ 280 ರನ್ಗಳೊಂದಿಗೆ ತಿಲಕ್ ವರ್ಮಾ ಈ ದಾಖಲೆ ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ 140ರ ಸರಾಸರಿಯಲ್ಲಿ ಮತ್ತು 198ರ ಸ್ಟ್ರೈಕ್ ರೇಟ್‌ನಲ್ಲಿ 280 ರನ್ ಗಳಿಸಿದ್ದು ತಿಲಕ್ ವರ್ಮಾ ಅವರ ಮತ್ತೊಂದು ದಾಖಲೆ. ಮೂರನೇ ಟಿ20 ಹಾಗೂ ಕೊನೆಯ ಟಿ20ಯಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ತಿಲಕ್ ವರ್ಮಾ ಸತತ 2 ಶತಕ ಸಿಡಿಸಿ ವಿಶ್ವದ 5ನೇ ಹಾಗೂ ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು.
ನಾಲ್ಕನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 36 ರನ್ ಗಳಿಸಿದರೆ, ತಿಲಕ್ ವರ್ಮಾ (47 ಎಸೆತಗಳಲ್ಲಿ 120*) ಮತ್ತು ಸಂಜು ಸ್ಯಾಮ್ಸನ್ (56 ಎಸೆತಗಳಲ್ಲಿ 109*) ಅವರ ಅಮೋಘ ಆಟದಿಂದ ಭಾರತ 283/1 ಬೃಹತ್ ಮೊತ್ತ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 148 ರನ್ಗಳಿಗೆ ಸರ್ವಪತನ ಕಂಡಿತು.
ಇದನ್ನೂ ಓದಿ:IND vs SA 4th T20: ಒಂದೇ ಪಂದ್ಯದಲ್ಲಿ 9 ದಾಖಲೆ ಬರೆದ ಟೀಂ ಇಂಡಿಯಾ, 18 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಮೊದಲು!