ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಂಕು ಸಿಂಗ್ ಸದ್ದಿಲ್ಲದೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹರಿದಾಡಿವೆ. ಪ್ರಿಯಾ ಸರೋಜ್ ಇತ್ತೀಚೆಗೆ 25ನೇ ವಯಸ್ಸಿನಲ್ಲಿ ಮಚ್ಲಿಶಹರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಇಬ್ಬರೂ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಷ್ಟೇ ಅಲ್ಲದೇ ಸಹ ಕ್ರಿಕೆಟಿಗರು ಮತ್ತು ಅಭಿಮಾನಿಗಳು ರಿಂಕು ಸಿಂಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಿದ್ದಾರೆ ಎಂದು ಹೇಳಲಾಗಿದೆ. ರಿಂಕುವಿನ ತಂಗಿ ನೇಹಾ ಸಿಂಗ್ ಕೂಡ ತನ್ನ ಅಣ್ಣನ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ರಿಂಕು ಅವರ ಇಡೀ ಮನೆ ಸಿಂಗಾರಗೊಂಡಂತೆ ಕಾಣುತ್ತಿದ್ದು, ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂದು ನೆಟ್ಟಿಗರು ಊಹೆ ಮಾಡುತ್ತಿದ್ದಾರೆ.
ಆದರೆ, ಈ ಬಗ್ಗೆ ರಿಂಕು ಸಿಂಗ್ ಆಗಲಿ ಸಂಸದೆ ಪ್ರಿಯಾ ಸರೋಜ್ ಆಗಲಿ ಅಧಿಕೃತ ಹೇಳಿಕೆ ನೀಡಲ್ಲ. ಆದರೆ ಸಂಸದೆ ಪ್ರಿಯಾ ಸರೋಜ್ ಅವರ ತಂದೆ ತುಫಾನಿ ಸರೋಜ್ ಪ್ರತಿಕ್ರಿಯೆ ನೀಡಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ತೂಫಾನಿ ಸರೋಜ್ ಅವರು ಮಾಧ್ಯಮದವರೊಂದಿಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು, 'ಅಲಿಘರ್‌ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುವ ತನ್ನ ಎರಡನೇ ಅಳಿಯನ ಮನೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೇವು. ಇದೇ ವೇಳೆ ಪ್ರಿಯಾ ಸರೋಜ್ ಮತ್ತು ರಿಂಕು ಸಿಂಗ್ ವಿವಾಹದ ಬಗ್ಗೆ ಮಾತುಕತೆ ನಡೆದಿದೆ. ಸದ್ಯಕ್ಕೆ ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದ್ದು, ನಿಶ್ಚಿತಾರ್ಥ ವಿಚಾರ ಅಂತಿಮ ನಿಣಾರ್ಯಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.