ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಇಂದು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಗೆಲುವಿನೊಂದಿಗೆ ಶೇಕಡಾವಾರು ಅಂಕಗಳಲ್ಲಿಯೂ ಸುಧಾರಣೆ ಕಂಡು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಪ್ರಸ್ತುತ ಶೇ.71.67 ಅಂಕಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, ಶೇ.62.50 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಭಾರತ ಮತ್ತು ಆಸೀಸ್ ನಡುವೆ ಶೇಕಡಾ 10 ರಷ್ಟು ವ್ಯತ್ಯಾಸವಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶ ಶೇ.39.29 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
2023-25ರ ವಿಶ್ವ ಟೆಸ್ಟ್ ಚಾಂಪಿಯನ್ಸ್ ಋತುವಿನಲ್ಲಿ ಟೀಂ ಇಂಡಿಯಾ ಇದುವರೆಗೆ 10 ಪಂದ್ಯಗಳನ್ನು ಆಡಿದೆ ಮತ್ತು ಅವುಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 2 ರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ದಾಖಲಿಸಿದ್ದು, 3 ಪಂದ್ಯಗಳಲ್ಲಿ ಸೋಲು ಮತ್ತು 1ರಲ್ಲಿ ಡ್ರಾ ಸಾಧಿಸಿದೆ. 62.5 ಶೇಕಡವಾರು ಅಂಕಗಳೊಂದಿಗೆ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ (ಶೇ 42.86), ಇಂಗ್ಲೆಂಡ್ (ಶೇ 42.19), ಬಾಂಗ್ಲಾದೇಶ (39.29), ಮತ್ತು ದಕ್ಷಿಣ ಆಫ್ರಿಕಾ (38.89) ನಂತರದ ಸ್ಥಾನದಲ್ಲಿವೆ.