ನವದೆಹಲಿ:ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸದ ಸುದ್ದಿ. ವೈಯಕ್ತಿಕ ಕಾರಣಗಳಿಂದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿರುವ ಕಾಯಂ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ಹೌದು, ರೋಹಿತ್ ಶರ್ಮಾ ನವೆಂಬರ್ 24 ರಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ. ಹಿಟ್‌ಮ್ಯಾನ್ ನೇರವಾಗಿ ಮೊದಲ ಟೆಸ್ಟ್ ಪಂದ್ಯದ ಸ್ಥಳವಾದ ಪರ್ತ್‌ಗೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಅಂದರೆ ಈ ಪಂದ್ಯ ಆರಂಭವಾದ ಮೂರನೇ ದಿನ ರೋಹಿತ್ ಪರ್ತ್ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹಿಟ್‌ಮ್ಯಾನ್ ನವೆಂಬರ್ 23 ರಂದು ಮುಂಬೈನಲ್ಲಿ ವಿಮಾನ ಏರಲಿದ್ದಾರೆ. 24ರಂದು ಪರ್ತ್ ತಲುಪಲಿದ್ದಾರೆ. ನಂತರ, ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗುವ ಎರಡನೇ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ತಯಾರಿ ಹೇಗೆ ನಡೆಸಬೇಕು ಎಂದು ಕೋಚಿಂಗ್ ಸಿಬ್ಬಂದಿಯೊಂದಿಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ, ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ರೋಹಿತ್ ಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ.
ಆಸೀಸ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತದ ಆಟಗಾರರು ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ. ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೆ ಅವರು ಎರಡನೇ ಮಗುವಿನ ಪೋಷಕರಾಗಿದ್ದಾರೆ. ಈ ಕಾರಣದಿಂದಾಗಿ ನಾಯಕ ಆಸೀಸ್ ಪ್ರವಾಸದ ಮೊದಲ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು.
ತಂಡದ ಆಡಳಿತ ಮಂಡಳಿಯು ಮೊದಲ ಟೆಸ್ಟ್‌ನ ನಾಯಕತ್ವದ ಜವಾಬ್ದಾರಿಯನ್ನು ಉಪನಾಯಕ ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಿದೆ. ರೋಹಿತ್ ತಂಡ ಸೇರಿಕೊಂಡ ಬಳಿಕ ಅವರು ನಾಯಕತ್ವವನ್ನು ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹಿಟ್‌ಮ್ಯಾನ್ ಆಸೀಸ್ ಪ್ರವಾಸ ಕೈಗೊಳ್ಳುವ ಸುದ್ದಿಯು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ:IPL ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ತಂಡಗಳಿವು: RCBಗೆ ಎಷ್ಟನೇ ಸ್ಥಾನ?