ಬ್ರಿಡ್ಜ್‌ಟೌನ್ (ಬಾರ್ಬಡೋಸ್):ನಂ.1 ಬ್ಯಾಟರ್ಸೂರ್ಯಕುಮಾರ್ ಯಾದವ್ ಸ್ಫೋಟಕ ಅರ್ಧಶತಕ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಅತ್ಯುತ್ತಮ ಬೌಲಿಂಗ್ ದಾಳಿ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 47 ರನ್ಗಳ ಸುಲಭದ ಜಯ ದಾಖಲಿಸಿದೆ. ಬಾರ್ಬಡೋಸ್ನಲ್ಲಿನ ಗೆಲುವಿನೊಂದಿಗೆ ಸೂಪರ್- 8 ಹಂತದಲ್ಲಿ ರೋಹಿತ್ ಶರ್ಮಾ ಪಡೆಯು ಶುಭಾರಂಭ ಮಾಡಿದೆ.
ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದ ರೋಹಿತ್, ಕೇವಲ 8 ರನ್ಗೆ ಔಟಾದರು. 11 ರನ್ಗೆ ಮೊದಲ ವಿಕೆಟ್ ಪತನವಾದ ಬಳಿಕ ಕೊಹ್ಲಿ ಹಾಗೂ ಪಂತ್ ಉತ್ತಮ ಜೊತೆಯಾಟವಾಡಿದರು.
ತಂಡದ ಮೊತ್ತ 24 ರನ್ ಆಗಿದ್ದಾಗ ಉತ್ತಮವಾಗಿ ಆಡುತ್ತಿದ್ದ ಪಂತ್ರನ್ನು (20) ರಶೀದ್ ಖಾನ್ ಎಲ್ಬಿ ಬಲೆಗೆ ಬೀಳಿಸಿದರು. ಅದರ ಬೆನ್ನಲ್ಲೇ 24 ರನ್ ಬಾರಿಸಿದ್ದ ಕೊಹ್ಲಿ ಕೂಡ ರಶೀದ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗಿಳಿದ ಶಿವಂ ದುಬೆ ಒಂದು ಸಿಕ್ಸರ್ ಸಿಡಿಸಿ ಭರವಸೆ ಮೂಡಿಸಿದರೂ ಕೂಡ ಕೆಲ ಹೊತ್ತಲ್ಲೇ 10 ರನ್ಗೆ ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. 94 ರನ್ಗೆ ಭಾರತದ 4 ವಿಕೆಟ್ ಉರುಳಿದ್ದವು.
ಈ ಹಂತದಲ್ಲಿ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 4ನೇ ವಿಕೆಟ್ಗೆ ಅಮೂಲ್ಯ 56 ರನ್ ಸೇರಿಸಿ, ತಂಡದ ಸ್ಕೋರ್ನ್ನು 150ಕ್ಕೆ ತಲುಪಿಸಿತು. ಅಫ್ಘನ್ ಸ್ಪಿನ್ ದಾಳಿಯನ್ನು ಕಾಡಿದ ಸೂರ್ಯಕುಮಾರ್ ಯಾದವ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇವರಿಗೆ ಹಾರ್ದಿಕ್ (32) ಉತ್ತಮ ಸಾಥ್ ನೀಡಿದರು.
ಕೊನೆಯಲ್ಲಿ ಅಕ್ಷರ್ ಪಟೇಲ್ 12, ರವೀಂದ್ರ ಜಡೆಜಾ 7 ರನ್ ಗಳಿಸಿ ತಂಡದ ಮೊತ್ತವನ್ನು 8 ವಿಕೆಟ್ಗೆ 181ಕ್ಕೆ ಕೊಂಡೊಯ್ದರು. ಅಫ್ಘಾನಿಸ್ತಾನ ಪರ ಫಾರೂಕಿ 33ಕ್ಕೆ 3 ಹಾಗೂ ನಾಯಕ ರಶೀದ್ ಖಾನ್ 26 ರನ್ಗೆ 3 ವಿಕೆಟ್ ಪಡೆದರು.