Sachin Tendulkar Played For Pakistan: ಸಚಿನ್ ತೆಂಡೂಲ್ಕರ್ ಈ ಹೆಸರು ಕೇಳದವರು ಜಗತ್ತಿನಲ್ಲಿ ಯಾರೂ ಇಲ್ಲ. ತಮ್ಮ ಬ್ಯಾಟಿಂಗ್ನಿಂದಲೇ ಎದುರಾಳಿಗಳನ್ನು ಚೆಂಡಾಡುತ್ತಿದ್ದ ಸಚಿನ್ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರ. ಆಡು ಮುಟ್ಟದ ಸೊಪ್ಪಿಲ್ಲ ಸಚಿನ್ ಬರೆಯದ ದಾಖಲೆಗಳಿಲ್ಲ ಎಂಬಷ್ಟು ದಾಖಲೆಗಳನ್ನು ಸಚಿನ್ ಕ್ರಿಕೆಟ್ನಲ್ಲಿ ನಿರ್ಮಿಸಿದ್ದಾರೆ. ಆ ದಾಖಲೆಗಳು ಇಂದಿಗೂ ಕ್ರಿಕೆಟ್ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ನಿಂದ ಹಿಡಿದು 100 ಶತಕಗಳನ್ನು ಸಿಡಿಸಿದ ಏಕ ಮಾತ್ರ ಕ್ರಿಕೆಟಿಗನೆಂಬ ದಾಖಲೆಗಳು ಇವರ ಹೆಸರಲ್ಲಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಚಿನ್ ತೆಂಡೂಲ್ಕರ್ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲದ ವಿಷವೊಂದಿದೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಮೊದಲು ಸಚಿನ್ ಪಾಕಿಸ್ತಾನ ತಂಡದೊಂದಿಗೆ ಪಂದ್ಯವನ್ನಾಡಿದ್ದರು. ಇದು ಆಶ್ಚರ್ಯ ಎನಿಸಿದರೂ ನಿಜ.
ಪಾಕಿಸ್ತಾನಕ್ಕಾಗಿ ಆಡಿದ ತೆಂಡೂಲ್ಕರ್:ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿ ಅಂದರೆ 1989ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದಕ್ಕೂ ಮೊದಲು ತಮ್ಮ 13ನೇ ವಯಸ್ಸಿನಲ್ಲಿ ಪಾಕಿಸ್ತಾನ ತಂಡದಲ್ಲಿ ಆಡಿದ್ದರು. 1987ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ (CCI) ಸುವರ್ಣ ಮಹೋತ್ಸವದ ಅಂಗವಾಗಿ ಉಭಯ ತಂಡಗಳ ನಡುವೆ ಸೌಹಾರ್ದದ ಪಂದ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿ ಆಯೋಜಿಸಲಾಗಿತ್ತು.
ಇದಕ್ಕಾಗಿ ಭಾರತ ಪ್ರವಾಸಕ್ಕೆ ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಜನವರಿ 20, ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಭಾರತದೊಂದಿಗೆ ಅಭ್ಯಾಸ ಪಂದ್ಯವನ್ನು ಆಡಿತ್ತು. ಆದರೆ ಊಟದ ವಿರಾಮದ ಕಾರಣ ಪಾಕಿಸ್ತಾನದ ಅನುಭವಿ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದಿರ್ ಊಟಕ್ಕೆಂದು ಹೋಟೆಲ್ಗೆ ತೆರಳಿದ್ದರು. ಪಂದ್ಯ ಆರಂಭವಾದರೂ ಅವರು ಮೈದಾನಕ್ಕೆ ಬಂದಿರಲಿಲ್ಲ.