ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾದ 97 ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಆದೇಶವನ್ನು ಹಿಂಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದ 3ನೇ ಹಂತದ ಆಯ್ದ ರಸ್ತೆಗಳ ವೈಟ್ ಟಾಪಿಂಗ್ ಪ್ಯಾಕೇಜ್ 2 ರಿಂದ 6ರ ವರೆಗಿನ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದರು.
ಕಾಮಗಾರಿ ಸಂಬಂಧ ಕರೆದಿರುವ ಟೆಂಡರ್‌ಗಳನ್ನು ರದ್ದುಪಡಿಸಲು ಒಪ್ಪಿಗೆ ನೀಡಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸದೇ ಇರದ ಕಾರಣ ಟೆಂಡರ್ ರದ್ದು ಮಾಡಲು ತೀರ್ಮಾನಿಸಲಾಗಿದೆ. ಸುಮಾರು 1,177 ಕೋಟಿ ವೆಚ್ಚದ ವೈಟ್ ಟ್ಯಾಪಿಂಗ್ ಯೋಜನೆ ಇದಾಗಿದೆ. ಸುಮಾರು 119 ಕಿ.ಮೀ ಉದ್ದದ 97 ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಯ ಪ್ರಸ್ತಾವನೆ ಇತ್ತು. ಇದುವರೆಗೂ ಕಾಮಗಾರಿ ಆರಂಭವಾಗದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಹೊಸ ಗೋಶಾಲೆ ಬದಲು ಹಳೆ ಗೋಶಾಲೆಗಳಿಗೆ ಹಣ: 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ಹೊಸ ಗೋಶಾಲೆಗಳ ನಿರ್ಮಾಣ ಎಂಬುದನ್ನು ''ಪ್ರಸ್ತುತ ಕಾರ್ಯನಿರ್ವಹಿಸುತಿರುವ ಗೋಶಾಲೆಗಳನ್ನು ಬಲವರ್ಧನೆಗೊಳಿಸಲು'' ಎಂದು ಮಾರ್ಪಾಡು ಮಾಡಿ, ಉಳಿಕೆಯಾಗಿರುವ 10.50 ಕೋಟಿ ರೂ.ಗಳ ಅನುದಾನವನ್ನು ಅವಶ್ಯವಿರುವ 14 ಜಿಲ್ಲೆಗಳಲ್ಲಿ ಗೋಶಾಲೆಗಳ ಬಲವರ್ಧನೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹೊಸ ಗೋಶಾಲೆ ಬದಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳಿಗೆ ವ್ಯಯಿಸಲು ತೀರ್ಮಾನಿಸಲಾಗಿದೆ. ಕಾರವಾರ, ಹಾಸನ, ಬೆಂಗಳೂರು ನಗರ, ಮಂಡ್ಯ, ಬೆಂಗಳೂರು (ಗ್ರಾಮಾಂತರ), ದಕ್ಷಿಣಕನ್ನಡ, ಧಾರವಾಡ, ಉಡುಪಿ, ಮೈಸೂರು, ತುಮಕೂರು, ಉಡುಪಿ, ಬೀದರ್, ದಕ್ಷಿಣಕನ್ನಡ, ಬೆಳಗಾವಿ 14 ಜಿಲ್ಲೆಗಳಲ್ಲಿ ಹೊಸ ಗೋಶಾಲೆಗಳ ಕಾಮಗಾರಿ ಪೂರ್ಣವಾಗಿದೆ. 2021-22ನೇ ಸಾಲಿನಲ್ಲಿ ಘೋಷಿಸಲಾಗಿರುವಂತೆ ಪ್ರತಿ ಜಿಲ್ಲೆಗೆ 1ರಂತೆ 30 ಜಿಲ್ಲೆಗಳ ಸರ್ಕಾರಿ ಗೋಶಾಲೆಗಳ ಕಾಮಗಾರಿಗಳು ಪೂರ್ಣಗೊಂಡು 16 ಜಿಲ್ಲೆಗಳ ಸರ್ಕಾರಿ ಗೋಶಾಲೆಗಳಲ್ಲಿ ಜಾನುವಾರುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಹೊಸದಾಗಿ 35 ಗೋಶಾಲೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, 14 ಗೋಶಾಲೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಗೋಶಾಲೆಗಳಿಗೆ ಯಾವುದೇ ಜಾನುವಾರುಗಳು ಸೇರ್ಪಡೆಯಾಗದ ಕಾರಣ ಹೊಸ ಗೋಶಾಲೆಗಳನ್ನು ಪ್ರಾರಂಭಿಸುವ ಬದಲಾಗಿ ಪ್ರಸ್ತುತ ಜಾನುವಾರುಗಳನ್ನು ನಿರ್ವಹಣೆ ಮಾಡುತ್ತಿರುವ ಗೋಶಾಲೆಗಳನ್ನು ಬಲವರ್ಧನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಜ.13ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜ.13ಕ್ಕೆ ಅಲ್ಲಿ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜ.6, 7 ಅಥವ 9ಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ಚಿಂತಿಸಲಾಗುತ್ತಿತ್ತು. ಆದರೆ, ಆ ದಿನ ಸಚಿವ ಬೈರತಿ ಸುರೇಶ್ ಪುತ್ರನ ಮದುವೆ ಸಮಾರಂಭ ಇರುವ ಹಿನ್ನೆಲೆ ಇದೀಗ ಜ.13ಕ್ಕೆ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ಚರ್ಚೆ ನಡೆದಿದೆ.
ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು:
- ಮೈಸೂರು ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ಒಟ್ಟು 120 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
- 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ಅಂದಾಜು ಮೊತ್ತದಲ್ಲಿ ನೂತನ ಕಟ್ಟಡಗಳನ್ನು ನಬಾರ್ಡ್ ಸಹಾಯಾನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
- 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತ ಮತ್ತು ಬಿಳಿ ಜೋಳ ಖರೀದಿಸಲು ಅವಶ್ಯವಿರುವ ತಲಾ 580 ಗ್ರಾಂ ತೂಕದ 15 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು 10.88 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಆವರ್ತಕ ನಿಧಿಯಡಿ ಲಭ್ಯವಿರುವ ಅನುದಾನದಿಂದ ಮತ್ತು ರಾಗಿಯನ್ನು ಖರೀದಿಸಲು ಅವಶ್ಯವಿರುವ ತಲಾ 775 ಗ್ರಾಂ ತೂಕದ 74.82 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು GeM Portal ಮೂಲಕ ಆವರ್ತಕ ನಿಧಿಯಡಿ ಲಭ್ಯವಿರುವ ಅನುದಾನದಿಂದ ಖರೀದಿ ಮಾಡಲು ಅನುಮೋದನೆ.
- ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಾಜಿ ವಿಧಾನ ಪರಿಷತ್ ಸದಸ್ಯರು ಇವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ HSR ಬಡಾವಣೆಯ 'ಜಿ' ಪ್ರವರ್ಗದಡಿ ಸೆಕ್ಟರ್-6ರಲ್ಲಿ ಹಂಚಿಕೆಯಾಗಿರುವ ನಿವೇಶನ ಸಂಖ್ಯೆ ಎಲ್- 209ಕ್ಕೆ ಗುತ್ತಿಗೆ ಅವಧಿಯಲ್ಲಿಯೇ ಶುದ್ಧ ಕ್ರಯ ಪತ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿಯಮಗಳನ್ನು ಸಡಿಲಿಸಿ ನೋಂದಾಯಿಸಿ ಕೊಡುಲು ಒಪ್ಪಿಗೆ.
- ಜಿ.ಎಸ್. ನ್ಯಾಮಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರು, ಇವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ “ಜಿ” ಪ್ರವರ್ಗದಡಿ ಸರ್.ಎಂ. ವಿಶ್ವೇಶ್ವರಯ್ಯ 1ನೇ ಬ್ಲಾಕ್ ಬಡಾವಣೆಯಲ್ಲಿ ಹಂಚಿಕೆಯಾಗಿರುವ 15+24 ಮೀ. ಅಳತೆಯ ನಿವೇಶನ ಸಂಖ್ಯೆ: 3258ಕ್ಕೆ ಗುತ್ತಿಗೆ ಅವಧಿಯಲ್ಲಿಯೇ ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿಯಮಗಳನ್ನು ಸಡಿಲಿಸಿ ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಿಕೊಡಲು ಒಪ್ಪಿಗೆ.
- ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಬಂದರು ನಿರ್ಮಾಣ ಕಾಮಗಾರಿಗಾಗಿ 209 ಕೋಟಿ ರೂ. ಪರಿಷ್ಕೃತ ಅಂದಾಜಿ ವೆಚ್ಚಕ್ಕೆ ಅನುಮೋದನೆ. ಈ ಮುಂಚೆ 188.83 ಕೋಟಿ ರೂ. ಅಂದಾಜು ವೆಚ್ಚ ಇತ್ತು. ಭೂ ಸ್ವಾಧೀನಕ್ಕಾಗಿ ಮೀಸಲಿಟ್ಟಿದ್ದ ರಾಜ್ಯದ ಪಾಲಿನಲ್ಲಿ ಹೆಚ್ಚುವರಿಯಾಗಿ 21 ಕೋಟಿ ರೂ. ಕೊಡಬೇಕಾಯಿತು. ಹಾಗಾಗಿ, ಈ ಪರಿಷ್ಕೃತ ಮೊತ್ತಕ್ಕೆ ಅಸ್ತು.
- ಮೀನುಗಾರಿಕಾ ಬಂದರುಗಳ ನಿರ್ಮಾಣ, ಬಂದರಿನಲ್ಲಿ ಹೂಳೆತ್ತುವ ಕಾಮಗಾರಿಗಳಿಗೆ 84.57 ಕೋಟಿ ರೂ. ಮೊತ್ತಕ್ಕೆ ಒಪ್ಪಿಗೆ.
- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿಯು ಪ್ರಸ್ತುತ 500 ಕೋಟಿ ರೂ.ಗಳಿದ್ದು, ಅದನ್ನು 5000 ಕೋಟಿ ರೂ.ಗಳಿಗೆ ಹೆಚ್ಚಿಸಲು ತೀರ್ಮಾನ. ಹೆಚ್ಚುವರಿ ಜಮೀನು ಖರೀದಿಗಾಗಿ ಸಾಲದ ಮಿತಿ ಹೆಚ್ಚಳಕ್ಕೆ ತೀರ್ಮಾನ.
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ 56.92 ಕೋಟಿ ರೂ.ಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿನಿಲಯಗಳಿಗೆ ಬೆಡ್ ಶೀಟ್, ಸೊಳ್ಳೆ ಪರದೆಗಳು, ಟ್ರಾಕ್ ಸೂಟ್ ಮತ್ತು ನೈಟ್ ಡ್ರೆಸ್‌ಗಳ ಸಾಮಗ್ರಿಗಳನ್ನು ಪೂರೈಸಲು ಆಡಳಿತಾತ್ಮಕ ಅನುಮೋದನೆ.
- ಮೇಲ್ಮನೆಯ ಒಂದು ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಬಗ್ಗೆ ಚರ್ಚೆ. ಜೆಡಿಎಸ್ ಸದಸ್ಯ ಕೆ.ತಿಪ್ಪೇಸ್ವಾಮಿ ಅವಧಿ ಮುಕ್ತಾಯದಿಂದ ತೆರವಾಗುವ ಸ್ಥಾನಕ್ಕೆ ನಾಮಕರಣ ಮಾಡಲು ಸಿಎಂಗೆ ಅಧಿಕಾರ.
- ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗಳ ಕಟ್ಟಡ ನಿರ್ಮಾಣ 149 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ತೀರ್ಮಾನ. ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ.
ಇದನ್ನೂ ಓದಿ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ: ಸಂಪುಟ ಒಪ್ಪಿಗೆ ಹಿನ್ನೆಲೆ ಧಾರವಾಡದಲ್ಲಿ ಸಂಭ್ರಮಾಚರಣೆ