ಕೊಲ್ಹಾಪುರ (ಮಹಾರಾಷ್ಟ್ರ) : ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿ, ಅಂತ್ಯಕ್ರಿಯೆಗೆ ಮೃತದೇಹ ಒಯ್ಯುವಾಗ ವ್ಯಕ್ತಿಯೊಬ್ಬ ಬದುಕುಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಈ ಘಟನೆ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.
ಘಟನೆಯ ವಿವರ: ಪಾಂಡುರಂಗ ಉಲ್ಪೆ ಎಂಬವರು, ಮನೆಯಲ್ಲಿ ದೇವರ ನಾಮಸ್ಮರಣೆ ಮಾಡುತ್ತಿರುವ ವೇಳೆ ಕುಳಿತಲ್ಲೇ ಬೆವರಿ ಹೃದಯಾಘಾತಕ್ಕೀಡಾಗಿದ್ದಾರೆ. ತಕ್ಷಣಕ್ಕೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಶೀಲಿಸಿದ ವೈದ್ಯರು, ದೇಹದಲ್ಲಿ ಯಾವುದೇ ಚಲನೆ ಕಂಡುಬರದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾಗಿ ತಿಳಿಸಿ ಮನೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ತೀವ್ರ ದುಃಖದಲ್ಲಿದ್ದ ಕುಟುಂಬಸ್ಥರು, ಶವದ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ಆರಂಭಿಸಿದ್ದಾರೆ.
ದಾರಿಯಲ್ಲಿ ಬಿಗ್ ಟ್ವಿಸ್ಟ್: ಪಾಂಡುರಂಗ ಅವರ ದೇಹವನ್ನು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿರುವಾಗಲೇ ನೋಡಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಂಬ್ಯುಲೆನ್ಸ್‌ನಲ್ಲಿ ದೇಹವನ್ನು ಸಾಗಿಸಲಾಗುತ್ತಿತ್ತು. ರಸ್ತೆಯಲ್ಲಿದ್ದ ಗುಂಡಿಗೆ ಆಂಬ್ಯುಲೆನ್ಸ್ ಧಸಕ್ಕನೆ ಇಳಿದಿದೆ. ಈ ವೇಳೆ ಪಾಂಡುರಂಗ ಅವರು ಮಿಸುಕಾಡಿದ್ದಾರೆ. ಪಕ್ಕದಲ್ಲಿ ಕುಳಿತವರು ಇದನ್ನು ಗಮನಿಸಿದ್ದಾರೆ.
ವಾಹನ ನಿಲ್ಲಿಸಿ ಪರಿಶೀಲಿಸಿದಾಗ, ಪಾಂಡುರಂಗ ಉಲ್ಪೆ ಅವರು ಬದುಕಿರುವುದು ಗೊತ್ತಾಗಿದೆ. ತಕ್ಷಣವೇ ಅವರನ್ನು ಮರಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದಾಗ ಜೀವ ಮರಳಿ ಬಂದಿತ್ತು. ಹೃದಯವು ಸಾಧಾರಣವಾಗಿ ಬಡಿದುಕೊಳ್ಳುತ್ತಿತ್ತು. ವೈದ್ಯರು ಚಿಕಿತ್ಸೆ ಆರಂಭಿಸಿದ್ದು, ಇದೀಗ ಅವರ ಸ್ಥಿತಿ ಉತ್ತಮವಾಗಿದೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಈ ಬಗ್ಗೆ ಹೃದ್ರೋಗ ತಜ್ಞ ಡಾ.ಸ್ನೇಹದೀಪ್ ಪಾಟೀಲ್ ಮಾತನಾಡಿದ್ದು, ಕೆಲವೊಮ್ಮೆ ಹೀಗಾಗಬಹುದು. ಅದಕ್ಕೆ ವೈದ್ಯಕೀಯ ಕಾರಣಗಳಿವೆ. ಒಬ್ಬ ವ್ಯಕ್ತಿಯು ಮೂರು ರೀತಿಯಲ್ಲಿ ಸಾಯುತ್ತಾನೆ. ಕೆಲವೊಮ್ಮೆ ವ್ಯಕ್ತಿ ಮೃತಪಟ್ಟಿರುವುದಿಲ್ಲ. ಆದರೆ, ವೈದ್ಯಕೀಯ ವರದಿ ಸಾವೆಂದು ಸೂಚಿಸುತ್ತವೆ. ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಸ್ನೇಹಿತೆ ವರಿಸಲು ಹೋಗಿ ಪಾಕಿಸ್ತಾನದ ಜೈಲು ಪಾಲಾದ ಭಾರತದ ವ್ಯಕ್ತಿ