ಹೈದರಾಬಾದ್/ವಿಶಾಖಪಟ್ಟಣಂ:ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಇಬ್ಬರೂ ಎರಡನೇ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಇಬ್ಬರು ಹೊರಗುಳಿಯಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ನಾಲ್ಕನೇ ದಿನದ ಆಟದಲ್ಲಿ ಜಡೇಜಾ ಕಾಲಿನ ಸ್ನಾಯು ನೋವಿಗೆ ತುತ್ತಾಗಿದ್ದು, ರಾಹುಲ್ ಬಲ ತೊಡೆಯ ನೋವಿನಿಂದ ಬಳಲಿದ್ದಾರೆ. ಸದ್ಯ ಬಿಸಿಸಿಐ ವೈದ್ಯಕೀಯ ತಂಡವು ಇಬ್ಬರ ತಪಾಸಣೆ ನಡೆಸುತ್ತಿದೆ. ಹಾಗಾಗಿ ಮುಂದಿನ ಪಂದ್ಯಕ್ಕೆ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮೊದಲ ಟೆಸ್ಟ್ನಲ್ಲಿ ಜಡೇಜಾ ಮತ್ತು ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ್ದರು. ಜಡೇಜಾ 87 ರನ್ ಗಳಿಸಿದರೇ, ರಾಹುಲ್ 86 ರನ್ಗಳನ್ನು ಬಾರಿಸಿದ್ದರು. ಇದೇ ಪಂದ್ಯದಲ್ಲಿ ಆಲ್ರೌಂಡರ್ ಜಡೇಜಾ 56 ವಿಕೆಟ್ಗಳನ್ನು ಉರುಳಿಸಿ ಮಿಂಚಿದ್ದರು. ಆದರೆ, ಈ ಪಂದ್ಯವನ್ನು ಭಾರತ ಸೋಲು ಅನುಭವಿಸಿತು.
ಇಬ್ಬರು ಆಟಗಾರರ ಅನುಪಸ್ಥಿತಿಯಲ್ಲಿ BCCI ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಮುಂದಿನ ಪಂದ್ಯಕ್ಕಾಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಅವೇಶ್ ಖಾನ್ ಸದ್ಯ ರಣಜಿ ಟ್ರೋಫಿಯನ್ನು ಆಡುತ್ತಿದ್ದು, ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಆಯ್ಕೆ ಸಮಿತಿ ಹೇಳಿದೆ.
ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗಾಗಿ ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಸ್ ಭರತ್ (ವಿಕೆಟ್-ಕೀಪರ್), ಧ್ರುವ್ ಜುರೆಲ್ (ವಿಕೆಟ್ - ಕೀಪರ್), ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್