ಜೈಪುರ:ಐಪಿಎಲ್ನಲ್ಲಿ ಛಲ ಮತ್ತು ಗುರಿಯನ್ನು ಬೆನ್ನಟ್ಟಿ ಗೆಲ್ಲುತ್ತಿರುವ ತಂಡಗಳಲ್ಲಿ ರಾಜಸ್ಥಾನ ರಾಯಲ್ಸ್ ಮೊದಲಿದೆ. ಯುವ ಪಡೆಯನ್ನು ಹೊಂದಿರುವ ತಂಡ ನೀಡುತ್ತಿರುವ ಸಾಂಘಿಕ ಪ್ರದರ್ಶನದಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ನಿಜವಾದ ಖದರ್ ತೋರಿಸದೇ ಇರುವುದು, ತಂಡಕ್ಕೆ ಹಿನ್ನಡೆ ಉಂಟಾಗಿದೆ.
ಉಭಯ ತಂಡಗಳ ಕಾದಾಟವು ಇಂದು ಸಂಜೆ 7.30ಕ್ಕೆ ನಡೆಯಲಿದ್ದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಹಣಾಹಣಿಗೆ ವೇದಿಕೆಯಾಗಲಿದೆ. ಗುಜರಾತ್ ಹೊರತುಪಡಿಸಿ ಎಲ್ಲ ತಂಡಗಳ ವಿರುದ್ಧ ವಿಕ್ರಮ ಸಾಧಿಸಿರುವ ಸಂಜು ಸ್ಯಾಮ್ಸನ್ ನೇತೃತ್ವದ ತಂಡ, ಹಾರ್ದಿಕ್ ಪಾಂಡ್ಯ ಮುಂದಾಳತ್ವದ ತಂಡವನ್ನು 2ನೇ ಬಾರಿಗೆ ಎದುರಿಸಲಿದೆ. ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ರಾಯಲ್ಸ್ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೂಲಕ ಪ್ಲೇ ಆಫ್ಗೆ ಇನ್ನಷ್ಟು ಸನಿಹವಾಗುವ ತವಕದಲ್ಲಿದೆ.
ತವರಿನ ಮೈದಾನದಲ್ಲಿ ಆಡಿದ 4 ಪಂದ್ಯಗಳಲ್ಲಿ 3-1 ರಲ್ಲಿ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ಜಾಸ್ ಬಟ್ಲರ್,ರಿಯಾನ್ ಪರಾಗ್, ಸಿಮ್ರಾನ್ ಹೆಟ್ಮಾಯರ್, ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಬಟ್ಲರ್ ಕಳೆದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯ ಗೆಲ್ಲಿಸಿದ್ದು ಅವಿಸ್ಮರಣೀಯ ಮತ್ತು ಯುವ ಆಟಗಾರರಿಗೆ ಪಾಠದಂತಿತ್ತು. ಬೌಲಿಂಗ್ನಲ್ಲಿ ಟ್ರೆಂಟ್ ಬೌಲ್ಟ್, 3ನೇ ಅತ್ಯಧಿಕ ವಿಕೆಟ್ ಟೇಕರ್ ಆಗಿರುವ ಯಜುವೇಂದ್ರ ಚಹಲ್ ಮತ್ತು ನಂಡ್ರೆ ಬರ್ಗರ್ ಎದುರಾಳಿಯನ್ನು ಕಟ್ಟಿಹಾಕುತ್ತಿರುವುದು ಪ್ಲಸ್ ಪಾಯಿಂಟ್.
ಗೆಲ್ಲುವ ಒತ್ತಡದಲ್ಲಿ ಮುಂಬೈ:ಇತ್ತ, ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಖ್ಯಾತ ಆಟಗಾರರನ್ನು ಹೊಂದಿದ್ದರೂ, ನಿರೀಕ್ಷಿತ ಫಲಿತಾಂಶ ಪಡೆಯುತ್ತಿಲ್ಲ. ಇಶಾನ್ ಕಿಶನ್, ರೋಹಿತ್ ಶರ್ಮಾ, ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಜಸ್ಪ್ರೀತ್ ಬೂಮ್ರಾ, ಗೆರಾಲ್ಡ್ ಕಾಟ್ಜೆಯಂತಹ ಘಟಾನುಘಟಿಗಳು ಗೆಲುವು ತಂದುಕೊಡುವಲ್ಲಿ ಎಡವುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 4 ಸೋತಿದೆ. 6 ಪಾಯಿಂಟ್ನೊಂದಿಗೆ ಸದ್ಯ 7 ನೇ ಸ್ಥಾನದಲ್ಲಿದೆ. ಪ್ಲೇಆಫ್ನಲ್ಲಿ ಸ್ಥಾನ ಪಡೆಯಲು ತಂಡ ಇನ್ನಷ್ಟು ಸುಧಾರಿತ ಪ್ರದರ್ಶನ ನೀಡಲೇಬೇಕಿದೆ.