ನವದೆಹಲಿ: 2036ರ ಒಲಿಂಪಿಕ್ಗೆ ಆತಿಥ್ಯ ವಹಿಸುವುದು ಭಾರತದ ಕನಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ 2036ರ ಒಲಿಂಪಿಕ್ಗೆ ಆತಿಥ್ಯ ವಹಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತ, "ಈ ಬಾರಿ ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತದ ಧ್ವಜವನ್ನು ಹಾರಿಸಿದ ಯುವ ಕ್ರೀಡಾಪಟುಗಳು ನಮ್ಮೊಂದಿಗಿದ್ದಾರೆ. 140 ಕೋಟಿ ಜನರ ಪರವಾಗಿ ನಾನು ಅವರೆಲ್ಲರನ್ನು ಅಭಿನಂದಿಸುತ್ತೇನೆ. ಇನ್ನು ಕೆಲವೇ ದಿನಗಳಲ್ಲಿ ಪ್ಯಾರಾ ಒಲಿಂಪಿಕ್ ನಡೆಯಲಿದ್ದು, ಇದರಲ್ಲೂ ಭಾರತದ ಪ್ಯಾರಾ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಅವರಿಗೆ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಭಾರತ ಹೊಸ ಕನಸು, ನಿರ್ಣಯಗಳು ಮತ್ತು ಪ್ರಯತ್ನಗಳೊಂದಿಗೆ ಹೊಸ ಗುರಿಗಳತ್ತ ಸಾಗುತ್ತಲೇ ಇರುತ್ತದೆ" ಎಂದರು.
"ಈ ಹಿಂದೆ ನಾವು ಜಿ-20 ಶೃಂಗಸಭೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಇದರೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ಭಾರತಕ್ಕಿದೆ ಎಂಬುದನ್ನು ಜಿ-20 ಶೃಂಗಸಭೆ ಮೂಲಕ ಇಡೀ ಜಗತ್ತಿಗೆ ಸಾಬೀತುಪಡಿಸಿದ್ದೇವೆ. ಹಾಗಾಗಿ 2036ರ ಒಲಿಂಪಿಕ್ಸ್‌ಗೂ ಆತಿಥ್ಯ ವಹಿಸುವುದು ಭಾರತದ ಕನಸಾಗಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ" ಎಂದು ಇದೇ ವೇಳೆ ತಿಳಿಸಿದರು. 2030ರಲ್ಲಿ ಯೂತ್ ಒಲಿಂಪಿಕ್ಗೆ ಆತಿಥ್ಯ ವಹಿಸಲು ಭಾರತ ಬಿಡ್ ಮಾಡುವ ಸಾಧ್ಯತೆಯೂ ಇದೆ.