ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸ್ಪಷ್ಟ ಸೂಚನೆ ನೀಡಿರುವ ಸಚಿವರು, ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಅಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ಸಚಿವ ಖಂಡ್ರೆ ಸೂಚಿಸಿದ್ದಾರೆ.
ಅನುಮತಿ ಇಲ್ಲದೆ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಹಾಗೂ 'ಕಾಂತಾರ -1' ಸಿನಿಮಾ ಚಿತ್ರೀಕರಣ ನಡೆಸುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಅರಣ್ಯ ಸಚಿವರು ಈ ಸೂಚನೆ ನೀಡಿದ್ದಾರೆ. ಅನುಮತಿ ಕಡ್ಡಾಯಗೊಳಿಸಲು ನಿರ್ದೇಶನ ನೀಡಿದ್ದಾರೆ.
'ಟಾಕ್ಸಿಕ್' ಮತ್ತು 'ಕಾಂತಾರ -1' ಇವೆರಡು ಬಹುನಿರೀಕ್ಷಿತ ಚಿತ್ರಗಳಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿವೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ - 1 ಚಿತ್ರತಂಡ ಷರತ್ತು ಉಲ್ಲಂಘಿಸಿದ್ದರೆ ಕ್ರಮ: ಸಚಿವ ಈಶ್ವರ್ ಖಂಡ್ರೆ - ESHWAR KHANDRE