ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸೋಮವಾರ ರಾತ್ರಿ ಮೂರನೇ ಪದಕ ಸಾಧನೆ ಮಾಡಿದೆ. ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕ ಗೆದ್ದರು. ಪುರುಷರ F64 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 70.59 ಮೀಟರ್ ದೂರ ಜಾವೆಲಿನ್ ಎಸೆದ ಸುಮಿತ್ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮದೇ ಆದ ಹಳೆಯ ದಾಖಲೆ ಮುರಿದರು. ಇದಕ್ಕೂ ಮುನ್ನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ 68.55 ಮೀಟರ್ ದೂರ ಜಾವೆಲಿನ್ ಎಸೆದ ದಾಖಲೆ ಸುಮಿತ್ ಹೆಸರಲ್ಲಿತ್ತು.
ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲೇ 69.11 ಮೀಟರ್ ದೂರಕ್ಕೆ ಭರ್ಝಿ ಎಸೆಯುವ ಮೂಲಕ ಹೊಸ ದಾಖಲೆ ಬರೆದರು. ಎರಡನೇ ಪ್ರಯತ್ನದಲ್ಲೂ 70.59 ಮೀಟರ್ ದೂರಕ್ಕೆಸೆದು ದಾಖಲೆ ನಿರ್ಮಿಸಿದರು. ಇದರೊಂದಿಗೆ, ಸುಮಿತ್ ಒಂದೇ ಪಂದ್ಯದಲ್ಲಿ ಎರಡು ಬಾರಿ ಪ್ಯಾರಾಲಿಂಪಿಕ್ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ. ಉಳಿದಂತೆ, ಶ್ರೀಲಂಕಾದ ದುಲಾನ್ 67.03 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಮೈಕಲ್ ಬುರಿಯನ್ 64.89 ಮೀಟರ್ ಎಸೆದು ಕಂಚಿನ ಪದಕ ಪಡೆದುಕೊಂಡರು.