ಹೈದರಾಬಾದ್: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಇದೀಗ ಡಬಲ್ ಆತ್ಮವಿಶ್ವಾಸದೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಿದೆ. ಫೆ.20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಚಾಂಪಿಯನ್ಸ್ ಟ್ರೋಫಿ ಬೇಟೆಯನ್ನು ಪ್ರಾರಂಭಿಸಲಿದೆ.
ಆದಾಗ್ಯೂ, ಟೂರ್ನಿಗಾಗಿ ಆಯ್ಕೆ ಮಾಡಲಾದ ತಂಡದ ವಿಚಾವಾಗಿ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಡುವೆ ಒಮ್ಮತವಿಲ್ಲ ಎಂದು ತೋರುತ್ತಿದೆ. ಆಯ್ಕೆ ಸಭೆಯಲ್ಲಿ, ವಿಕೆಟ್ ಕೀಪರ್ ಮತ್ತು ಶ್ರೇಯಸ್ ಅಯ್ಯರ್ ವಿಚಾರವಾಗಿ ತಂಡದಲ್ಲಿ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆಡಿದ್ದರೂ, ಎರಡನೇ ಆಯ್ಕೆಯ ವಿಕೆಟ್ ಕೀಪರ್ ಆಗಿರುವ ರಿಷಭ್ ಪಂತ್‌ಗೆ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಚಾಂಪಿಯನ್ಸ್ ಟ್ರೋಫಿ ಹೊಸ್ತಿಲಲ್ಲಿದ್ದರೂ, ಪಂತ್ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.
ಪಂತ್ vs ಕೆಲ್ ರಾಹುಲ್: ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂತ್ ಮೊದಲ ಆಯ್ಕೆ ಆಗಿರಲಿದ್ದಾರೆ ಎಂದು ಅಗರ್ಕರ್ ತಿಳಿಸಿದ್ದರು. ಆದರೆ ಕೋಚ್ ಗಂಭೀರ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ಮೊದಲ ಆಯ್ಕೆ ಕೆಎಲ್ ರಾಹುಲ್ ಆಗಿರಲಿದ್ದಾರೆ ಎಂದು ತಿಳಿಸಿದ್ದರು.
"ರಾಹುಲ್ ನಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಸದ್ಯಕ್ಕೆ ನಾನು ಇಷ್ಟೇ ಹೇಳಬಲ್ಲೆ. ಆದರೂ ಯಾವುದೇ ಕ್ಷಣದಲ್ಲೂ ಪಂತ್‌ಗೂ ಅವಕಾಶಗಳು ಸಿಗಬಹುದು. ರಾಹುಲ್ ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದ ಕಾರಣ ಒಂದೆ ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳನ್ನು ಆಡಿಸುವುದು ಸಾಧ್ಯವಿಲ್ಲ" ಎಂದು ಗಂಭೀರ್ ಹೇಳಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.
ಶ್ರೇಯಸ್ ಬಗ್ಗೆಯೂ ವಾಗ್ವಾದ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಶ್ರೇಯಸ್ ಅವರನ್ನು ಆಯ್ಕೆ ಮಾಡಲು ಅಗರ್ಕರ್ಗೆ ಇಷ್ಟವಿರಲಿಲ್ಲವಾದರೂ, ಗಂಭೀರ್ ಅವರ ಒತ್ತಾಯಕ್ಕೆ ಮಣಿದು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಗಂಭೀರ್ ಅವರ ನಿರ್ಧಾರವನ್ನು ಅಯ್ಯರ್ ಸಾಭೀತು ಪಡಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಕಮ್ಬ್ಯಾಕ್ ಮಾಡಿರುವ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ 181 ರನ್ ಗಳಿಸಿದ್ದಾರೆ.
ಮತ್ತೊಂದೆಡೆ ಗಂಭೀರ್ ಮಧ್ಯಮ ಕ್ರಮಾಂಕದಲ್ಲಿ ಬಲ-ಎಡ ಸಂಯೋಜನೆಗೆ ಮನ್ನಣೆ ನೀಡಿದ್ದಾರೆ. ಇದೆ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಅಕ್ಷರ್ ಅವರನ್ನು 5ನೇ ಸ್ಥಾನಕ್ಕೆ ಬ್ಯಾಟಿಂಗ್ಗೆ ಕಳುಹಿಸಲಾಗಿತ್ತು. ಅಕ್ಷರ್ 52 ಮತ್ತು 41 ರನ್ ಗಳಿಸಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾ ವಿರುದ್ಧದ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅಕ್ಷರ್ ಪ್ರಮುಖ ಇನ್ನಿಂಗ್ಸ್ ಆಡಿದ್ದರು. ಅವರು 47 ರನ್ ಗಳಿಸಿದ್ದರು. ಈ ಹಿನ್ನೆಲೆ ಪಂತ್‌ಗೆ ಅಂತಿಮ ತಂಡದಲ್ಲಿ ಸ್ಥಾನ ಸಿಗುವುದು ಬಹತೇಕ ಅನುಮಾನವಾಗಿದೆ. ಈ ವಿಚಾರವಾಗಿಯೂ ಗಂಭೀರ್ ಮತ್ತು ಅಗರ್ಕರ್ ನಡುವೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮತ್ತೆ ನರಿಬುದ್ಧಿ ತೋರಿಸಿದ ಪಾಕಿಸ್ತಾನ: ಭಾರತೀಯ ಫ್ಯಾನ್ಸ್ ಫುಲ್ ಗರಂ!