ಜೌನ್‌ಪುರ(ಉತ್ತರ ಪ್ರದೇಶ): ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಮಂದಿ ಮೃತಪಟ್ಟಿರುವ ಘಟನೆ ವಾರಾಣಸಿ - ಲಖನೌ ಚತುಷ್ಪಥದ ಬಾದಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಮೊದಲ ಅಫಘಾತ ಘಟನೆಯಲ್ಲಿ ಜಾರ್ಖಂಡ್‌ನಿಂದ ಬನಾರಸ್‌ಗೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಕಾರು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಒಟ್ಟು 11 ಮಂದಿ ಇದ್ದು, ಇವರಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಅಪಘಾತದ ಸ್ವಲ್ಪ ಸಮಯದ ನಂತರ ಎರಡನೇ ಅಪಘಾತದಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಹರಿಯಾಣ ನಂಬರ್ ಪ್ಲೇಟ್‌ನ ಸ್ಲೀಪರ್ ಬಸ್ ಅಪಘಾತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ಪ್ರಯಾಗರಾಜ್ ಮಹಾಕುಂಭದಲ್ಲಿ ಸ್ನಾನ ಮುಗಿಸಿ ವಾರಾಣಸಿಗೆ ತೆರಳಿ ಅಲ್ಲಿ ಬಾಬಾ ವಿಶ್ವನಾಥನ ದರ್ಶನ ಮುಗಿಸಿ ಎಲ್ಲರೂ ಅಯೋಧ್ಯೆಗೆ ಹೋಗುತ್ತಿದ್ದರು. ಇದರಲ್ಲಿಯೂ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 30 ಜನರು ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ 30 ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಭಕ್ತರು ದೆಹಲಿಯಿಂದ ಬಂದವರು ಎನ್ನಲಾಗಿದೆ. ಟ್ರಕ್ ಸರ್ಕಾರಿ ಪಡಿತರ ತುಂಬಿದ್ದು, ಬರೇಲಿಗೆ ಹೋಗುತ್ತಿತ್ತು. ಅಪಘಾತದ ನಂತರ ಡಿಎಂ ಮತ್ತು ಎಸ್ಪಿ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಐವರು ಶವವಾಗಿ ಪತ್ತೆ: ಕಾಣೆಯಾದ ಎಲ್ಲ 9 ಮಂದಿ ಸಾವು