ಪ್ರಯಾಗ್ರಾಜ್, ಉತ್ತರಪ್ರದೇಶ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಬುಧವಾರ ಪ್ರಯಾಗ್ರಾಜ್ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿ, ಸಾಧು - ಸಂತರ ಆಶೀರ್ವಾದ ಪಡೆದುಕೊಂಡರು.
ಕುಟುಂಬದ ಸದಸ್ಯರೊಂದಿಗೆ ಮಹಾಕುಂಭಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಅದ್ಬುತ ಕ್ಷಣ ಎಂದು ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಪಂಚದಲ್ಲಿ ಎಲ್ಲಿಯೂ ನಡೆದಿಲ್ಲ ಇಷ್ಟೊಂದು ದೊಡ್ಡ ಮೇಳ: ಮತ್ತೊಂದು ಕಡೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ನೂರಾರು ಕಾರ್ಯಕರ್ತರೊಂದಿಗೆ ಪ್ರಯಾಗ್ರಾಜ್ಗೆ ಆಗಮಿಸಿ, ಪುಣ್ಯ ಸ್ನಾನ ಮಾಡಿ ಪುನೀತರಾದರು . ಇಷ್ಟು ದೊಡ್ಡ ಮಟ್ಟ ಧಾರ್ಮಿಕ ಕಾರ್ಯಕ್ರಮವನ್ನು ವಿಶ್ವದಲ್ಲಿ ಎಲ್ಲಿಯೂ ಆಯೋಜಿಸಿಲ್ಲ. ಮಹಾಕುಂಭ ದೇಶಾದ್ಯಂತ ಜನರನ್ನು ಒಟ್ಟಿಗೆ ಸೇರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುಂಭದಲ್ಲಿ ಭಾಗಿಯಾಗಲು ನಾನು ಅದೃಷ್ಟ ಮಾಡಿದ್ದೇನೆ: ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾತನಾಡಿ, ತಲೆಮಾರುಗಳಿಂದಲೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ . ಮಹಾಕುಂಭದಲ್ಲಿ ಭಾಗವಹಿಸಲು ನಾನು ಅದೃಷ್ಟ ಮಾಡಿದ್ದೇನೆ . ಇಲ್ಲಿನ ಶಕ್ತಿ ಮತ್ತು ಸಕಾರಾತ್ಮಕತೆ ನಂಬಲು ಅಸಾಧ್ಯ ಎಂದು ತಿಳಿಸಿದರು.
ಅದ್ಬುತ ಅಧ್ಯಾತ್ಮಿಕ ಸಂಗಮ: ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಮಾತನಾಡಿ, ಜೀವಮಾನದಲ್ಲಿ ಒಮ್ಮೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು. 144 ವರ್ಷಗಳಿಗೆ ಒಮ್ಮೆ ಬರುವ ಮಹಾಕುಂಭದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ. ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಲು ಆಗಮಿಸುತ್ತಿದ್ದು, ಇದು ನಿಜವಾದ ಅದ್ಬುತ ಅಧ್ಯಾತ್ಮಿಕ ಸಂಗಮವಾಗಿದೆ ಎಂದರು.
ಇದನ್ನೂ ಓದಿ: ಮಹಾಕುಂಭದ ಸ್ನಾನದ ಬಳಿಕ ಕನಸಿನಲ್ಲಿ ಬಂದ ತಾಯಿ; 32 ವರ್ಷಗಳ ಬಳಿಕ ಮನೆಗೆ ಬಂದ ಮಗ; ಪುತ್ರನ ಕಂಡು ಹರ್ಷದ ಹೊನಲು!
ಇದನ್ನೂ ಓದಿ: ಮಹಾ ಕುಂಭಮೇಳ: 75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ