ಹುಬ್ಬಳ್ಳಿ: ಕಡಲೆಕಾಳು ಉತ್ತರ ಕರ್ನಾಟಕದ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರಗಳತ್ತ ರೈತರು ಮುಖಮಾಡುತ್ತಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಉತ್ತಮ ಕಡಲೆಕಾಳು ಇಳುವರಿ ಬಂದಿದೆ. ಕಡಲೆ ಒಕ್ಕಣೆ ಮಾಡಿರುವ ರೈತರು ಮಾರಾಟದಲ್ಲಿ ತೊಡಗಿದ್ದಾರೆ. ಇನ್ನು ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಲಾದ ಖರೀದಿ ಕೇಂದ್ರಗಳು ನೋಂದಣಿ ಇಲ್ಲದೆ ಬಿಕೋ ಎನ್ನುತ್ತಿವೆ. ಅವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಇದಕ್ಕೆ ಕಾರಣ.
ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಬೆಳೆ ಖರೀದಿ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತ ಜ. 30ರಂದು ಪ್ರಕಟಣೆ ಹೊರಡಿಸಿತ್ತು. ಪ್ರತಿ ಕ್ವಿಂಟಾಲ್‌ಗೆ 5,650 ರೂ. ದರ ನಿಗದಿಪಡಿಸಲಾಗಿದ್ದು, ಕಡಲೆ ಖರೀದಿಸಲು ಜಿಲ್ಲೆಯಾದ್ಯಂತ 24 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಜ. 23ರಂದು ನೋಂದಣಿ ಆರಂಭವಾಗಿದ್ದು, ಏಪ್ರಿಲ್ 12ರ ವರೆಗೆ ಖರೀದಿ ನಡೆಯಲಿದೆ. ನೋಂದಣಿಯ ಜತೆಗೆ ಜ.23 ರಿಂದ ಏ.22ರ ವರೆಗೆ ಕಡಲೆಕಾಳು ಬೆಳೆ ಖರೀದಿಸಲಾಗುತ್ತದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕಡಲೆಕಾಳು ಖರೀದಿಸಲಾಗುತ್ತದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಆದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೇವಲ 75 ಜನ ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 1,08,062 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ.
ಷರತ್ತುಗಳೇನು ? ಕಡಲೆಕಾಳು ಚೆನ್ನಾಗಿ ಒಣಗಿರಬೇಕು. ತೇವಾಂಶವು ಶೇ. 14ಕ್ಕಿಂತ ಕಡಿಮೆ ಇರಬೇಕು. ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಕಾಳು ಗಟ್ಟಿಯಾಗಿದ್ದು, ಮಣ್ಣಿನಿಂದ ಬೇರ್ಪಡಿಸಿರಬೇಕು. ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು, ಸಹಕಾರ ಮಾರಾಟ ಮಹಾಮಂಡಳದವರು ನೀಡುವ ಗೋಣಿ ಚೀಲದಲ್ಲಿ 50 ಕೆ. ಜಿ. ಪ್ರಮಾಣದಲ್ಲಿ ತುಂಬಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಇಷ್ಟೆಲ್ಲ ಷರತ್ತುಗಳನ್ನು ಪೂರೈಸಿ ನೋಂದಣಿ ಮಾಡಿಕೊಂಡು ಕಾಳು ಮಾರಾಟ ಮಾಡಿದರೆ ಹಣ ಜಮೆಯಾಗಲು ಕನಿಷ್ಠ 1 ತಿಂಗಳಾದರೂ ಬೇಕು. ಅಲ್ಲದೆ, ಮಾರುಕಟ್ಟೆಯಲ್ಲಿ ಕಡಲೆ ದರ ಕ್ವಿಂಟಾಲ್‌ಗೆ 5,500 ರಿಂದ 7,000 ರೂಪಾಯಿವರೆಗೆ ಇದೆ. ಹೀಗಾಗಿ ನಷ್ಟ ಮಾಡಿಕೊಂಡು ಕಡಲೆ ಮಾರಾಟ ಮಾಡಲು ರೈತರು ತಯಾರಿಲ್ಲ. ಪರಿಣಾಮ ಖರೀದಿ ಕೇಂದ್ರಗಳಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ನೋಂದಣಿ ಪ್ರಕ್ರಿಯೆಗೆ ಆರಂಭದಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು. ಮತ್ತೊಂದೆಡೆ ಜಿಲ್ಲೆಯ ಬಹುತೇಕ ರೈತರು ಬಿಳಿ ಕಡಲೆ ಬೆಳೆದಿದ್ದು, ಖರೀದಿ ಕೇಂದ್ರಗಳಲ್ಲಿ ಕೆಂಪು ಕಡಲೆ ಮಾತ್ರ ಖರೀದಿ ಮಾಡಲಾಗುತ್ತಿದೆ.
ಈ ಕುರಿತು ಕುಂದಗೋಳದ ರೈತರ ಬಸವರಾಜ್ ಯೋಗಪ್ಪನವರ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಕೇಂದ್ರ ಸರ್ಕಾರ ಕಡಲೆಕಾಳಿಗೆ 5,650 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಎಕರೆಗೆ ಎರಡ್ಮೂರು ಚೀಲ ಕಡಲೆ ಇಳುವರಿ ಬಂದಿದೆ. ನಾವು ಖರ್ಚು ಮಾಡಿದ ಹಣವೂ ಮರಳಿ ಬಾರದ ಸ್ಥಿತಿ ಇದೆ. ಬೀಜ, ಗೊಬ್ಬರ ಸೇರಿದಂತೆ ಎಕರೆಗೆ 10 ಸಾವಿರದಷ್ಟು ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಸಾಲುತ್ತಿಲ್ಲ. ಹೀಗಾಗಿ 10,000 ಬೆಂಬಲ ಬೆಲೆ ಘೋಷಣೆ ಮಾಡಬೇಕು" ಎಂದು ಆಗ್ರಹಿಸಿದರು.
"ಬೆಂಬಲ ಬೆಲೆ ಅತ್ಯಂತ ಕಡಿಮೆ ಘೋಷಣೆ ಮಾಡಲಾಗಿದೆ. ಎಕರೆಗೆ ಎರಡ್ಮೂರು ಚೀಲ ಇಳುವರಿ ಬಂದಿದೆ. 9 ರಿಂದ 10 ಸಾವಿರ ರೂ.ಗೆ ಕಡಲೆ ಖರೀದಿ ಮಾಡಬೇಕು. ಬಹಳ ಕಷ್ಟಪಟ್ಟು, ಸಾಲ ಮಾಡಿ ಬೆಳೆ ಬೆಳೆದಿದ್ದು, ಈಗ ಘೋಷಣೆ ಮಾಡಿದ ಬೆಂಬಲ ಬೆಲೆ ಹೆಚ್ಚಿಸಬೇಕು" ಎಂದು ಗುಡೇನಕಟ್ಟಿ ರೈತ ನಿಂಗಪ್ಪ ಕಂಬಳಿ ಒತ್ತಾಯಿಸಿದರು.
ಇದನ್ನೂ ಓದಿ: ಸಣ್ಣ ಮತ್ತು ಗೇಣಿದಾರ ರೈತರಿಗೆ ಸಿಗ್ತಿಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆವಿಮೆ ಲಾಭ.. ಇದಕ್ಕೆ ಬೇಕಿದೆ ಸ್ಪಷ್ಟ ನೀತಿ
ಇದನ್ನೂ ಓದಿ: ಟಿಬಿ ಡ್ಯಾಂನಿಂದ ಮಾರ್ಚ್ ಅಂತ್ಯದವರೆಗೆ ಮಾತ್ರ ಬೆಳೆಗಳಿಗೆ ನೀರು: ಅಲ್ಪಾವಧಿ ಬೆಳೆ ಬೆಳೆಯುವಂತೆ ಅಧಿಕಾರಿಗಳ ಸಲಹೆ