ಬೆಂಗಳೂರು: ಸರ ಕಳವು ಪ್ರಕರಣದಲ್ಲಿ ಗರ್ಭಿಣಿ ಮತ್ತು ಅವರ ಒಂದೂವರೆ ವರ್ಷದ ಮಗುವನ್ನು ಠಾಣೆಯಲ್ಲಿ ತಡರಾತ್ರಿವರಗೂ ಇರಿಸಿ ವಿಚಾರಣೆ ನಡೆಸಿದ ಆರೋಪದ ಮಾಹಿತಿ ಮೇರೆಗೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಪೊಲೀಸ್ ಇನ್ಸ್ಪೆಕ್ಟರ್ಗೆ ನೊಟೀಸ್ ಜಾರಿ ಮಾಡಿದ್ದಾರೆ.
ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಗರ್ಭಿಣಿ ಮತ್ತು ಅವರ ಒಂದೂವರೆ ವರ್ಷದ ಮಗು ಠಾಣೆಯಲ್ಲೇ ಇರಿಸಿಕೊಂಡಿರುವುದು ಗೊತ್ತಾಗಿತ್ತು. ಹೀಗಾಗಿ ಠಾಣಾಧಿಕಾರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿ ನೋಟಿಸ್ ಕೊಡಲಾಗಿದೆ. ಜೊತೆಗೆ ಮಹಿಳಾ ಸ್ವೀಕಾರ ಕೇಂದ್ರಕ್ಕೂ ಕೆಲವೊಂದು ಮಾಹಿತಿ ಕೇಳಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ - ವಿಚಾರಣೆ ಏಕೆ?: ಕೆ.ಆರ್.ಪುರ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಬಳಿ ಮನೆಯೊಂದರಲ್ಲಿ ವಾಸವಾಗಿದ್ದ ಸಂತ್ರಸ್ತ ಮಹಿಳೆಗೆ ಕೆಲ ದಿನಗಳ ಹಿಂದೆ ಊರಿಗೆ ಹೋಗುವ ಸಲುವಾಗಿ ಮೊದಲ ಮಹಡಿಯ ಮನೆಯ ಮಹಿಳೆಯೊಬ್ಬರು ಮನೆ ಕೀ ಕೊಟ್ಟು ಹೋಗಿದ್ದರು. ಊರಿಗೆ ಹೋಗಿ ವಾಪಸ್ ಮನೆಗೆ ಬಂದಾಗ ಬೀರುವಿನಲ್ಲಿಟ್ಟಿದ್ದ ಚಿನ್ನದ ಸರ ಕಳವಾಗಿತ್ತು. ಈ ಬಗ್ಗೆ ಮಹಿಳೆಯು ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಕೆ.ಆರ್.ಪುರ ಠಾಣೆ ಪೊಲೀಸರು, ಅನುಮಾನದ ಮೇರೆಗೆ ಸಂತ್ರಸ್ತ ಮಹಿಳೆಯನ್ನ ಠಾಣೆಗೆ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರೆದೊಯ್ದು ರಾತ್ರಿ11 ಗಂಟೆವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಮಹಿಳಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸಿದ್ದರು. ಮಂಗಳವಾರ ಬೆಳಗ್ಗೆಯಿಂದ ಮತ್ತೆ ಸಂಜೆವರೆಗೂ ವಿಚಾರಣೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಮಹಿಳೆಯ ಪತಿ: ಈ ಕುರಿತು ಸಂತ್ರಸ್ತೆ ಪತಿ ಭರತ್ ಎಂಬುವರು ಠಾಣೆಗೆ ಹೋಗಿ ವಿಚಾರಿಸಿದಾಗ ಪೊಲೀಸರು ಸರಿಯಾಗಿ ಸ್ಪಂದಿಸಲಿರಲಿಲ್ಲ. ಪತ್ನಿ ಭೇಟಿಗೂ ಅವಕಾಶ ನೀಡಿಲ್ಲ. ಈ ಸಂಬಂಧ ಭರತ್, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದ ಬಗ್ಗೆ ಮಾನವ ಹಕ್ಕುಗಳ ಅಧಿಕಾರಿಗಳು ನೀಡಿದ ಮಾಹಿತಿ ಇಷ್ಟು: ಭರತ್ ದೂರು ಆಧರಿಸಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಗರ್ಭಿಣಿ ಠಾಣೆಯಲ್ಲಿ ಇರುವುದು ಕಂಡು ಬಂದಿದೆ. ಹೀಗಾಗಿ ಗರ್ಭಿಣಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೂ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲಿಸಬೇಕಿದೆ. ಯಾವ ಪ್ರಕರಣದಲ್ಲಿ ಕರೆ ತರಲಾಗಿದೆ? ಎಷ್ಟು ಹೊತ್ತು ವಿಚಾರಣೆ ನಡೆಸಲಾಗಿದೆ? ಎಂಬೆಲ್ಲ ಮಾಹಿತಿ ನೀಡುವಂತೆ ಸೂಚಿಸಿ ಠಾಣಾಧಿಕಾರಿಗೆ ನೊಟೀಸ್ ನೀಡಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಮಹಿಳೆಗೆ ಎಚ್ಐವಿ ಇಂಜೆಕ್ಷನ್ ನೀಡಿದ ಆರೋಪ, ಪತಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 1 ವರ್ಷ ಶಿಕ್ಷೆ