ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ 11 ರನ್ಗಳ ಸೋಲನುಭವಿಸಿದೆ. 184 ರನ್ಗಳ ಗುರಿ ಬೆನ್ನಟ್ಟುವಲ್ಲಿ ಪಾಕಿಸ್ತಾನ ವಿಫಲವಾಯಿತು. ಇದೇ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ತಾವು ಬಯಸದ ದಾಖಲೆಯೊಂದನ್ನು ನಿರ್ಮಿಸಿ ಗಮನ ಸೆಳೆದರು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 4ನೇ ಅತಿ ನಿಧಾನಗತಿಯ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆಗೆ ರಿಜ್ವಾನ್ ಪಾತ್ರರಾಗಿದ್ದಾರೆ. 62 ಎಸೆತಗಳಲ್ಲಿ 74 ರನ್ ಗಳಿಸಿದ ಇವರು 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಹಿಂದಿನ ದಾಖಲೆಗಳಿವು..:
- ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ್ನಲ್ಲಿ ಕೀನ್ಯಾ ವಿರುದ್ಧ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಕಾಟಿಷ್ ಬ್ಯಾಟರ್ ರಿಯಾನ್ ವ್ಯಾಟ್ಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನಿ.
- ಗೌತಮ್ ಗಂಭೀರ್ 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದಾಖಲೆ ಹೊಂದಿದ್ದಾರೆ. ಇವರು ಅರ್ಧ ಶತಕ ಗಳಿಸಿದ ಎರಡನೇ ನಿಧಾನಗತಿಯ ಬ್ಯಾಟರ್ ಆಗಿದ್ದಾರೆ.
- ಪಾಕಿಸ್ತಾನದ ಬ್ಯಾಟರ್ ಶೋಯೆಬ್ ಖಾನ್ 2008ರಲ್ಲಿ ಜಿಂಬಾಬ್ವೆ ವಿರುದ್ಧ 53 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದರೊಂದಿಗೆ ಇವರು ಮೂರನೇ ಅತಿ ನಿಧಾನಗತಿಯ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ರಿಜ್ವಾನ್ 52 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿ ನಾಲ್ಕನೇ ಅತಿ ನಿಧಾನಗತಿಯ ಅರ್ಧಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.