National Games 2025: ಉತ್ತರಾಖಂಡದಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದ್ದು ಕರ್ನಾಟಕ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಜ್ಯದ 15 ವರ್ಷದ ಬಾಲಕ ಜೊನಾಥನ್ ಆ್ಯಂಟನಿ ಚಿನ್ನ ಗೆದ್ದರು.
ಇಂದು ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಂಗಳೂರಿನ ಕಿರಿಯ ಶೂಟರ್ ಜೊನಾಥನ್ ಆ್ಯಂಟನಿ ಇತಿಹಾಸ ಸೃಷ್ಟಿಸಿದರು. ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ಸರಬ್ಜೋತ್ ಸಿಂಗ್ ಮತ್ತು ಅನುಭವಿ ಶೂಟರ್ ಸೌರಭ್ ಚೌಧರಿ ಅವರನ್ನು ಸೋಲಿಸಿ ಈ ಸಾಧನೆ ಮಾಡಿದ್ದಾರೆ.
Finally us Jonathan's getting the recognition we deserve. Jonathan Antony, 15, beats Olympic bronze medallist Sarabjot Singh and Saurabh Choudhary to become youngest National Games champion in 10m air pistol. pic.twitter.com/Bzd5qWZVUs
— jonathan selvaraj (@jon_selvaraj) February 3, 2025
10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜೊನಾಥನ್, 240.7 ಅಂಕಗಳೊಂದಿಗೆ ಚಿನ್ನ ಗೆದ್ದರೆ, ರವೀಂದ್ರ ಸಿಂಗ್ 240.3 ಅಂಕಗಳೊಂದಿಗೆ ಬೆಳ್ಳಿ ಮತ್ತು ಗುರುಪ್ರೀತ್ ಸಿಂಗ್ 220.1 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಒಲಿಂಪಿಕ್ಸ್ ಪದಕ ವಿಜೆತ ಸರಬ್ಜೋತ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
8ನೇ ತರಗತಿಯಲ್ಲೇ ಶೂಟಿಂಗ್ ಶುರು: ಜೊನಾಥನ್ ಆ್ಯಂಟನಿ 2022ರಲ್ಲಿ ಸಿಬಿಎಸ್‌ಇ ದಕ್ಷಿಣ ವಲಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟಿಂಗ್ ವೃತ್ತಿಜೀವನ ಪ್ರಾರಂಭಿಸಿದ್ದರು. ಆಗ ಎಂಟನೇ ತರಗತಿಯಲ್ಲಿ ಓದುತ್ತಿದ್ದರು.
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಜೊನಾಥನ್, "ಇದು ನನ್ನ ವೃತ್ತಿಜೀವನದ ಅತೀ ದೊಡ್ಡ ಗೆಲುವು. ಒಲಿಂಪಿಕ್ಸ್ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರತಿಭಾವಂತ ಶೂಟರ್‌ಗಳ ವಿರುದ್ಧ ಸ್ಪರ್ಧಿಸಿ ಗೆದ್ದಿರುವುದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ನೀಡುತ್ತದೆ. ಇಂದು ನನ್ನ ದಿನ. ಗೆದ್ದ ಹೆಮ್ಮೆ ಇದೆ" ಎಂದರು.
ಸರಬ್ಜೋತ್ ಸಿಂಗ್: ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು. ಕೊರಿಯಾ ಸ್ಪರ್ಧಿಗಳ ವಿರುದ್ಧ ನಡೆದಿದ್ದ ಕಂಚಿನ ಪದಕ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತದ ಈ ಇಬ್ಬರು ಶೂಟರ್ಗಳು 16-10 ಅಂತರದಿಂದ ಜಯಿಸಿದ್ದರು. ಇದರೊಂದಿಗೆ 2024ರ ಒಲಿಂಪಿಕ್ಸ್ನಲ್ಲಿ ಶೂಟಿಂಗ್‌ನಲ್ಲಿ ಭಾರತ 3 ಕಂಚು ಗೆದ್ದುಕೊಂಡಿತ್ತು.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!