IPL 2025 RCB Captain: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಾರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.
ಅದರಲ್ಲೂ ಈ ಬಾರಿ ಅಳೆದು ತೂಗಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್‌ಸಿಬಿ ಚೊಚ್ಚಲ ಕಪ್ ಎತ್ತಿ ಹಿಡಿಯಬೇಕೆಂದು ಪಣತೊಟ್ಟಿದೆ. ಆದರೆ ಮುಂಬರುವ ಋತುವಿನಲ್ಲಿ ಆರ್‌ಸಿಬಿ ಯಾರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಕಳೆದ ವರ್ಷ, ಫಾಫ್ ಡು ಪ್ಲೆಸಿಸ್ RCB ನಾಯಕರಾಗಿದ್ದರು, ಆದರೆ ಈ ವರ್ಷ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ.
ಹೀಗಿರುವಾಗ ಆರ್‌ಸಿಬಿ ಯಾವ ಆಟಗಾರನಿಗೆ ತಂಡದ ಕಮಾಂಡ್ ನೀಡಬಹುದು ಎಂಬುದು ಕುತೂಹಲ ಕೆರಳಿಸಿದೆ. ಏತನ್ಮಧ್ಯೆ, ಆರ್‌ಸಿಬಿ ತಂಡದಲ್ಲಿರುವ ಈ ಮೂವರು ಆಟಗಾರರಲ್ಲಿ ಒಬ್ಬರು ತಂಡದ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಆ ಮೂವರು ಆಟಗಾರರ ಯಾರು ಎಂದು ಇದೀಗ ತಿಳಿದುಕೊಳ್ಳೋಣ.
3. ವಿರಾಟ್ ಕೊಹ್ಲಿ (Virat Kohli):ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಈ ಹಿಂದೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಅವರು ನಾಯಕತ್ವದ ಜೊತೆಗೆ ತಂಡವನ್ನು ಮುನ್ನಡೆಸುವ ಸಂಪೂರ್ಣ ಅನುಭವವನ್ನು ಹೊಂದಿದ್ದಾರೆ. ಮೊದಲ ಆವೃತ್ತಿಯಿಂದಲೂ ಆರ್ಸಿಬಿಯಲ್ಲಿರುವ ವಿರಾಟ್ ಪ್ರಮುಖ ಆಟಗಾರನಾಗಿದ್ದಾರೆ. ಅನುಭವಿ ಆಟಗಾರ ಆಗಿರುವ ಇವರಿಗೆ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಈ ಬಾರಿ ಕೊಹ್ಲಿಯನ್ನು ಆರ್‌ಸಿಬಿ 21 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿದೆ.
2. ಭುವನೇಶ್ವರ್ ಕುಮಾರ್ (Bhuvneshwar kumar):ಆರ್‌ಸಿಬಿ ನಾಯಕತ್ವದ ರೇಸ್ನಲ್ಲಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ. ಅನುಭವಿ ಬೌಲರ್ ಆಗಿರುವ ಭುವಿ ಟೀಂ ಇಂಡಿಯಾ ಪರ ಹಲವಾರು ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ಗಾಗಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಭುವಿಯನ್ನು 10.75 ಕೋಟಿ ರೂ.ಗೆ ಮೆಗಾ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡಿದೆ. ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು. ಭುವನೇಶ್ವರ್ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವವಿದ್ದು ಈ ಲೆಕ್ಕದಲ್ಲೂ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಬಹುದು ಎಂದು ಹೇಳಲಾಗುತ್ತಿದೆ.
1. ರಜತ್ ಪಾಟಿದಾರ್ (Rajat patidar): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಪಟ್ಟಿಯಲ್ಲಿ ರಜತ್ ಪಾಟಿದಾರ್ ಹೆಸರು ಮುಂಚುಣಿಯಲ್ಲಿದೆ. ರಜತ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರಲ್ಲಿ ಮಧ್ಯಪ್ರದೇಶದ ನಾಯಕರಾಗಿದ್ದು, ಅವರ ತಂಡವು ಫೈನಲ್ಗೂ ತಲುಪಿದೆ. ಇದರಲ್ಲಿ ಪಾಟಿದಾರ್ ಬ್ಯಾಟಿಂಗ್ ಮೂಲಕವೂ ಗಮನ ಸೆಳೆದಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲೂ ರಜತ್ RCB ಗಾಗಿ ಹಲವು ತ್ವರಿತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಬ್ಯಾಟ್ಸ್‌ಮನ್‌ನನ್ನು 11 ಕೋಟಿ ರೂ.ಗೆ ಉಳಿಸಿಕೊಂಡಿರುವ ಆರ್‌ಸಿಬಿ ನಾಯಕತ್ವದ ಜವಾಬ್ದಾರಿ ನೀಡವಹುದು ಎಂದು ವರದಿಯಾಗಿದೆ.
ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ಗೆ ಮಳೆ ಅಡ್ಡಿ: ಪಂದ್ಯ ರದ್ದಾದರೆ ಯಾರಿಗೆ ಲಾಭ?