Tim Southee Retirement: ವಿಶ್ವದ ಅಗ್ರ ಬೌಲರ್ಗಳಲ್ಲಿ ಒಬ್ಬರಾಗಿದ್ದ ಟಿಮ್ ಸೌಥಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮೈದಾನದಲ್ಲಿ ತಮ್ಮ ವೇಗದ ಬೌಲಿಂಗ್ನಿಂದಲೇ ಬ್ಯಾಟರ್ಗಳನ್ನು ಕಾಡುತ್ತಿದ್ದ ಡೇಂಜರಸ್ ಸೌಥಿಗೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಡಿಸೆಂಬರ್ 15ರಂದು ಹ್ಯಾಮಿಲ್ಟನ್‌ನ ತಮ್ಮ ತವರು ಮೈದಾನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಆಡಿ ಅವರು ವಿದಾಯ ಹೇಳಲಿದ್ದಾರೆ.
ನ್ಯೂಜಿಲೆಂಡ್‌ನ ದಿಗ್ಗಜ ಬೌಲರ್ ಎನಿಸಿಕೊಂಡಿರುವ ಸೌಥಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಕಾಡುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಒಟ್ಟು 11 ಬಾರಿ ಔಟ್ ಮಾಡಿದ್ದರು. ಇದಲ್ಲದೇ ರೋಹಿತ್ ಶರ್ಮಾ ಅವರನ್ನು 14 ಬಾರಿ ಪೆವಿಲಿಯನ್ಗೆ ಕಳುಹಿಸಿದ್ದರು. ಇತ್ತೀಚಿಗೆ ಭಾರತ ಪ್ರವಾಸದ ವೇಳೆಯೂ ಸೌಥಿ ಕಾಡಿದ್ದರು. ನ್ಯೂಜಿಲೆಂಡ್ ಭಾರತ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿ ಸರಣಿ ಗೆದ್ದುಕೊಂಡಿತ್ತು. ಇದರೊಂದಿಗೆ ಭಾರತ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕೈಚೆಲ್ಲಿತ್ತು.
ತಮ್ಮ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಸೌಥಿ, ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. ಬಾಲ್ಯದಿಂದಲೂ ಕಿವೀಸ್ ತಂಡದಲ್ಲಿ ಆಡಬೇಕೆಂದು ಕನಸು ಕಂಡಿದ್ದೆ. ಆ ಕನಸು ಇಂದು ನನಸಾಗಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ತಂಡದ ವಿರುದ್ಧವೇ ನಾನು ಕೊನೆಯ ಪಂದ್ಯ ಆಡಲಿದ್ದೇನೆ. ಹ್ಯಾಮಿಲ್ಟನ್‌ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.