ಅಮರಾವತಿ, ಮಹಾರಾಷ್ಟ್ರ: ಸಂಗೀತ ಪ್ರಿಯರು ಮತ್ತು ಹವ್ಯಾಸಿ ಸಂಗೀತಗಾರರಿಗಾಗಿ ಮಹಾರಾಷ್ಟ್ರದ ಅಮರಾವತಿಯಲ್ಲಿ ವಿಶಿಷ್ಟ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಇದೀಗ ದಾಖಲೆ ಬರೆದಿದೆ. ಈ ಸಂಗೀತ ರಸಸಂಜೆಯಲ್ಲಿ ಐದೂವರೆ ಸಾವಿರಕ್ಕೂ ಹೆಚ್ಚು ಹಾಡು ಮತ್ತು ಎರಡು ಮತ್ತು ಮೂರು ನಿಮಿಷದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನವಾದವು. ಸತತ 18 ದಿನಗಳ ಕಾಲ ನಡೆದ ಈ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ಮುದ ಅನುಭವ ನೀಡಿತು.
ಈ ಕುರಿತು ಮಾತನಾಡಿರುವ ದೆಹಲಿ ವರ್ಲ್ಡ್ ರೆಕಾರ್ಡ್ನ ಸಿಇಒ ಪವನ್ ಸೊಳಂಕಿ, ಇಂಜಿನಿರ್ ಭವನದಲ್ಲಿ 401 ಗಂಟೆಗಳ ಕಾಲ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರು ತಮ್ಮ ಹಾಡುಗಳ ಮೂಲಕ ಮನರಂಜನೆ ನೀಡಿದರು. ಕಾರ್ಯಕ್ರಮಕ್ಕೆ ಅಮರಾವತಿ ಶಾಸಕ ಸುಲಭ ಖೊಡ್ಕೆ ಕೂಡ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.
ವರ್ಣರಂಜಿತ ಸಂಗೀತ ಹಬ್ಬ: ಈ ದಾಖಲೆ ನಿರ್ಮಿತ ವಿಶೇಷ ಕಾರ್ಯಕ್ರಮವನ್ನು ಅಮರಾವತಿ ನಗರದ ಹವ್ಯಾಸಿ ಸಂಗೀತ ಸಂಸ್ಥೆ ಸ್ವರಾಜ್ಯ ಎಂಟರ್ಟೈನ್ಮೆಂಟ್ ಜನವರಿ 4 ರಂದು ಆರಂಭಿಸಿತ್ತು. ನಿರಂತರ ಕಾರ್ಯಕ್ರಮದಲ್ಲಿ ಭಾಗಿಯಾದ ನಗರದ ಹವ್ಯಾಸಿ ಸಂಗೀತಗಾರರು ಮತ್ತು ಕಲಾವಿದರು ಸತತ ಸಂಗೀತದ ಮೂಲಕ ದಾಖಲೆ ನಿರ್ಮಿಸಿದರು. ಕಾರ್ಯಕ್ರಮದಲ್ಲಿ ಎರಡೂವರೆ ಯಿಂದ ಮೂರು ಸಾವಿರ ಹವ್ಯಾಸಿ ಸಂಗೀತಗಾರರು ಭಾಗಿಯಾಗಿ ಗಮನ ಸೆಳೆದರು. ಆಸಕ್ತಿಕರ ಅಂಶ ಎಂದರೆ, ಇವರೆಲ್ಲಾ ಬೇರೆ ಬೇರೆ ಕ್ಷೇತ್ರದಲ್ಲಿ ವೃತ್ತಿ ಕಂಡುಕೊಂಡವರಾಗಿದ್ದಾರೆ. ಪೊಲೀಸರು, ವಿವಿಧ ಸಂಸ್ಥೆ ಉದ್ಯೋಗಿಗಳು ಮುನ್ಸಿಪಲ್ ಉಪ ಆಯುಕ್ತರು, ಶಿಕ್ಷಕರು, ಜಿಲ್ಲಾ ಪರಿಷದ್ ಅಧಿಕಾರಿಗಳು, ಡಿಸಿ ಕಚೇರಿ ಉದ್ಯೋಗಿಗಳು ಹೀಗೆ ನಾನಾ ಕ್ಷೇತ್ರದವರು ಕೂಡ ಈ ಸಂಗೀತ ಕಾರ್ಯಕ್ರಮದಲ್ಲಿ ಕಂಠಸಿರಿಯನ್ನು ಪ್ರದರ್ಶಿಸಿದರು.
ದಣಿವರಿಯದಂತೆ ನಡೆದ ಕಾರ್ಯಕ್ರಮ: ದಾಖಲೆ ನಿರ್ಮಾಣದ ಗುರಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಾನ್ ಸ್ಟಾಪ್ ಆಗಿ ಸಂಗೀತ ಗಾಯನ ನಡೆದಿದೆ. ಹಳೆ ಹೊಸ , ಸಿನಿಮಾ, ಗಜಲ್, ದೇವರ ಗೀತೆ, ಪ್ರೀತಿ ಹೀಗೆ ಎಲ್ಲ ವಿಧದ ಹಾಡುಗಳನ್ನು ಹಾಡಲಾಯಿತು.
24 ಗಂಟೆಯಲ್ಲಿ ಕೇವಲ 21 ನಿಮಿಷದ ಬ್ರೇಕ್: ದಾಖಲೆ ನಿರ್ಮಾಣದ ಗುರಿ ಹೊಂದಿದ ಹಿನ್ನೆಲೆ ಸಂಘಟಕರು ವೇದಿಕೆಯನ್ನು ಖಾಲಿ ಬಿಡಬಾರದು ಎಂದು ನಿರ್ಧರಿಸಿದ್ದರು. ಈ ಕಾರಣದಿಂದಾಗಿ 24 ಗಂಟೆಗಳಲ್ಲಿ ಕೇವಲ 21 ನಿಮಿಷದ ವಿರಾಮವನ್ನು ಮಾತ್ರ ನೀಡಲಾಗಿತ್ತು. ಕಲಾವಿದರೊಬ್ಬರ ಪ್ರದರ್ಶನ ಮುಗಿಯುತ್ತಿದ್ದಂತೆ ಮತ್ತೊಬ್ಬ ಕಲಾವಿದರು ವೇದಿಕೆಗೆ ಬರಲು ಅಣಿಯಾಗುತ್ತಿದ್ದರು. ಈ ವೇಳೆ, ಕೇವಲ ಅರ್ಧ ನಿಮಿಷದ ವಿರಾಮ ನೀಡಲಾಗುತ್ತಿತ್ತು. ಹೀಗೆ 24 ಗಂಟೆಯಲ್ಲಿ ಕೇವಲ 21 ನಿಮಿಷದ ಬ್ರೇಕ್ ನೀಡಲಾಗಿದೆ ಎಂದು ಸ್ವರಾಜ್ಯ ಎಂಟರ್ಟೈನಮೆಂಟ್ ಮುಖ್ಯಸ್ಥ ದಿನಕರ್ ತ್ಯಾಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೃತಕ ಅರಣ್ಯದ ಸೃಷ್ಟಿಕರ್ತ ದುಶಾರ್ಲಾ ಸತ್ಯನಾರಾಯಣ: ಯಾರಿವರು? ಏನಿವರ ಸಾಹಸ!?
ಇದನ್ನೂ ಓದಿ: 200 ಪೊಲೀಸರ ಕಣ್ಗಾವಲಿನಲ್ಲಿ 'ಬರಾತ್' ಮೆರವಣಿಗೆ ಮಾಡಿಕೊಂಡ ದಲಿತ ವರ!