ಕಾರವಾರ: "ಹಣ್ಣು ಮತ್ತು ತರಕಾರಿ ತುಂಬಿಕೊಂಡು ವ್ಯಾಪಾರಸ್ಥರೊಂದಿಗೆ ತೆರಳುತ್ತಿದ್ದ ಲಾರಿ ಇಂದು ಮುಂಜಾನೆ ಕಂದಕಕ್ಕೆ ಬಿದ್ದು 10 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಲಾರಿ ಬಿದ್ದಿರುವ ಸ್ಥಳ ಸಾಮಾನ್ಯವಾಗಿ ಯಾರಿಗೂ ಕಾಣುವುದಿಲ್ಲ. ಆದರೆ, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿ ಅಡಿ ಸಿಲುಕಿದ್ದವರನ್ನು ಹೊರ ತೆಗೆದು ಗಂಭೀರ ಗಾಯಗೊಂಡಿದ್ದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವ ಕಾಪಾಡಿದ್ದಾರೆ" ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
"ಹಾವೇರಿಯ ಸವಣೂರಿನಿಂದ ಮಂಗಳವಾರ ತಡರಾತ್ರಿ ಹಣ್ಣು ಹಾಗೂ ತರಕಾರಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಶಿರಸಿ ಕುಮಟಾ ಹೆದ್ದಾರಿ ಬಂದ್ ಆದ ಕಾರಣ ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ ಮಾರ್ಗವಾಗಿ ಕುಮಟಾದ ಸಂತೆಗೆ ತೆರಳುತ್ತಿದ್ದರು. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಯಲ್ಲಾಪುರದ ಅರೆಬೈಲ್ ಘಟ್ಟ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಂದಕಕ್ಕೆ ಉರುಳಿದೆ ಎನ್ನಲಾಗುತ್ತಿದೆ. ಮುಂಜಾನೆ ಇಬ್ಬನಿ ಹೆಚ್ಚಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿರಬಹುದು. ಆದರೆ, ಇದು ತನಿಖೆಯಿಂದ ತಿಳಿದುಬರಬೇಕಿದೆ. ಮೇಲ್ನೋಟಕ್ಕೆ ಈ ಅಪಘಾತ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬಳಿಕ ನಿಖರ ಮಾಹಿತಿ ತಿಳಿಯಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, "ಇನ್ನು ಹಾವೇರಿಯ ಸವಣೂರು ಭಾಗದ ಬಹುತೇಕರು ಪ್ರತಿ ವಾರವೂ ಸಂತೆಗಾಗಿ ಈ ಭಾಗಕ್ಕೆ ಬಂದು ವ್ಯಾಪಾರ ಮಾಡಿ ತೆರಳುತ್ತಿದ್ದರು. ಬಹುತೇಕರು ಬಡವರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಲಾರಿಯಲ್ಲಿದ್ದ ತರಕಾರಿ ಹಾಗೂ ಹಣ್ಣಿನ ಮೇಲೆ ಮಲಗಿದ್ದಾಗ ಲಾರಿ ಪಲ್ಟಿಯಾಗಿದೆ. ಇದರಿಂದ ಎಲ್ಲರು ಲಾರಿ ಅಡಿ ಭಾಗದಲ್ಲಿ ಸಿಲುಕಿದ್ದರು. ಪೊಲೀಸರು ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಲಾರಿ ಅಡಿ ಸಿಲುಕಿದ್ದ ಕೆಲವರನ್ನು ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಘಟನೆಯನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ತಕ್ಷಣ ಐಜಿಪಿ, ಎಸ್ಪಿ, ಡಿಸಿ ಸೇರಿದಂತೆ ಎಲ್ಲ ಅಧಿಕಾರಿಗಳು ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಸೂಕ್ತ ಚಿಕಿತ್ಸೆ ಸಿಗುವಂತೆ ವೈದ್ಯರು ಪ್ರಯತ್ನಿಸಿದ್ದಾರೆ. ಇದರಿಂದ ಹಲವರು ಗಂಭೀರ ಸ್ಥಿತಿಯಿಂದ ಪಾರಾಗಿದ್ದಾರೆ. ಸರ್ಕಾರ ಇದೀಗ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಈಗಾಗಲೇ ಚೆಕ್ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ" ಎಂದು ಶಾಸಕ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ: ಪ್ರಧಾನಿ ಮೋದಿ ಘಟನೆ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, "ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿ ಸಂಭವಿಸಿರುವುದು ತೀವ್ರ ದುಃಖ ತಂದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಮೃತರ ಪ್ರತಿ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು" ಎಂದು ತಿಳಿಸಿದ್ದಾರೆ.
Deeply saddened by the loss of lives in the accident in the Uttara Kannada district of Karnataka. Condolences to those who lost their loved ones. May the injured recover soon. The local administration is assisting those affected.
— PMO India (@PMOIndia) January 22, 2025
An ex-gratia of Rs. 2 lakh from PMNRF would be…
ಬಹುತೇಕ ಎಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಭಾಗದವರು 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜಲಾಲ್ ತಾರಾ (30) ಹುಬ್ಬಳಿ ಕೀಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡಿರುವವರ ಪೈಕಿ ಲಾರಿ ಡ್ರೈವರ್ ಅಶ್ರಪ್ ನಬಿ ಸಾಬ್ (18), ಖ್ವಾಜಾ ಮೊಹಮ್ಮದ್ ಗೌಸ್ ಕಿಸಮತಗಾರ್ (22), ಮೊಹಮ್ಮದ್ ಸಾದಿಕ್ ಖ್ವಾಜಾಮೀರ್ ಬತ್ತೇರಿ (25), ಖ್ವಾಜಾ ಮೈನು ಬಷೀರ್ ಅಹಮ್ಮದ್ ಕಾಲೆಕಾಲನ್ನವರ್ (24), ನಿಜಾಮ್ (30), ಮದ್ಲಾನ್ ಸಾಬ್ (24), ಜಾಪರ್ ಮುಕ್ತಿಯಾರ್ ಪ್ರಾಸ್ (22) ಅವರನ್ನು ಹುಬ್ಬಳಿ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನು ಮಲ್ಲಿಕ ರೆಹಾನ್ ಮೊಹಮ್ಮದ್ ರಫೀಕ್ ಅಕ್ಕಿ (21), ಅಪ್ತಾಬ್ ತಂದೆ ಭಷೀರ್ ಅಹಮಮದ್ ಮಂಚಕಿ (23), ಗೌಸ್ ಮೈದ್ದೀನ್ ಅಬ್ದುಲ್ ಗಣಿ ಬೊಮ್ಮನಹಳ್ಳಿ (30), ಇರ್ಪಾನ್ ಮುಕ್ಷುಲ್ ಗುಡಿಗೇರಿ (17), ನೂರ್ ಅಹಮ್ಮದ್ ಮೊಹಮ್ಮದ್ ಜಾಪರ್ ಜಮಕಂಡಿ (30), ಅಪ್ಸರ್ ಕಾಂಜಾಡ್ (34), ಸುಭಾಷ ಗೌಡರ್ (17), ಖಾದ್ರಿ ಗೂಡು ಸಾಬ್ ಜವಳಿ (26), ಸಾಬೀರ್ ಅಹಮ್ಮದ್ ಬಾಬಾ ಹುಸೇನ್ ಗವಾರಿ (38), ಮರ್ದಾನ್ ಸಾಬ್ ಕಮಲ್ ಬಾಷಾ ತಾರಾಡಿಗ (22), ರಪಾಯಿ ಬಾಕರ್ ಚೌರ (21), ಮೊಹಮ್ಮದ್ ಗೌಸ್ ಗಪಾರ್ ಅಕ್ತರ್ (22) ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಯಲ್ಲಾಪುರ ಭೀಕರ ಅಪಘಾತ: ತಂದೆಗೆ ಎಳನೀರು ಕುಡಿಸಿ ಹೋದ ಮಗ ಮರಳಿದ್ದು ಶವವಾಗಿ!: ಹತ್ತೂ ಮೃತರದ್ದು ಒಂದೊಂದು ಕಥೆ..!!