ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮುಂದಿನ ಬಹುನಿರೀಕ್ಷಿತ 'ಛಾವಾ' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನಾಧರಿಸಿದ ಸಿನಿಮಾದಲ್ಲಿ, ವಿಕ್ಕಿ ಮುಖ್ಯಭೂಮಿಕೆ ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದ್ದು, ಇಂದು ಟ್ರೇಲರ್ ರಿಲೀಸ್ ಆಗಿದೆ.
ಬಹುನಿರೀಕ್ಷಿತ ಪೀರಿಯಾಡಿಕಲ್ ಡ್ರಾಮಾ 'ಛಾವಾ' ಪ್ರಚಾರ ಪ್ರಾರಂಭವಾಗಿದ್ದು, ಚಿತ್ರತಂಡವಿಂದು ಟ್ರೇಲರ್ ಅನಾವರಣಗೊಳಿಸೋ ಮೂಲಕ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದ್ದು, ಈ ಚಿತ್ರ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಅವರ ಆಳ್ವಿಕೆಗೆ ಸಲ್ಲುತ್ತಿರುವ ಗೌರವವಾಗಿದೆ. ಮುಂದಿನ ತಿಂಗಳು ಫೆಬ್ರವರಿ 14ರಂದು ದೊಡ್ಡ ಪರದೆ ಮೇಲೆ ಪ್ರದರ್ಶನಗೊಳ್ಳಲಿರುವ ಸಿನಿಮಾ, ವಿಶೇಷವಾಗಿ ತಾರಾಬಳಗದಿಂದ ಸಖತ್ ಸದ್ದು ಮಾಡಿತ್ತು. ಇದೀಗ ಟ್ರೇಲರ್‌ನಲ್ಲಿ ಪ್ರದರ್ಶಿಸಲಾದ ಭರ್ಜರಿ ದೃಶ್ಯಗಳಿಂದಾಗಿ ಸಂಚಲ ಸೃಷ್ಟಿಸಿದೆ.
ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಕನ್ನಡತಿ ರಶ್ಮಿಕಾ ಮಂದಣ್ಣ ತಮ್ಮ ಗಡಿ ವಿಸ್ತರಿಸಿಕೊಳ್ಳುತ್ತಾ, ಸಿನಿಮಾ ವೃತ್ತಿಜೀವನದಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಈಗಾಗಲೇ ದೊಡ್ಡ ತಾರೆಯರೊಂದಿಗೆ ತೆರೆ ಹಂಚಿಕೊಂಡಿರುವ ನಟಿಯೀಗ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಜೊತೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಅನ್ನೋದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಇದನ್ನೂ ಓದಿ: ಯಾರಾಗಲಿದ್ದಾರೆ ಬಿಗ್ ಬಾಸ್ ವಿನ್ನರ್?: ನಿಮ್ಮಿಷ್ಟದ ಸ್ಪರ್ಧಿ ಯಾರು, ಗೆಲುವಿಗೆ ಅವರು ಅರ್ಹರೇ?
ಛಾವಾ ಟ್ರೇಲರ್ ಪ್ರೇಕ್ಷಕರಿಗೆ ಛತ್ರಪತಿ ಸಂಭಾಜಿ ಮಹಾರಾಜರ ಆಡಳಿತಾವಧಿಯನ್ನು ಪರಿಚಯಿಸಿದೆ. ಮಹಾರಾಜರ ಪಾತ್ರಕ್ಕೆ ವಿಕ್ಕಿ ಕೌಶಲ್ ಜೀವ ತುಂಬಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟನ ಅಭಿನಯ ಮರಾಠಾ ಆಡಳಿತಗಾರನ ಧೈರ್ಯ, ಬುದ್ಧಿವಂತಿಕೆ, ಶಕ್ತಿ ಸಾಮರ್ಥ್ಯ ಮತ್ತು ಅಚಲತೆಯನ್ನು ಪ್ರತಿಬಿಂಬಿಸಿದೆ. ಛತ್ರಪತಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ರಾಜಮನೆತನದ ನೋಟದೊಂದಿಗೆ ಛಾಪು ಮೂಡಿಸಿದ್ದಾರೆ. ಯಾವ ಪಾತ್ರಕ್ಕೂ ಸೈ, ಕೊಟ್ಟ ಪಾತ್ರಕ್ಕೆ ಜೀವ ತುಂಬೋ ಸಾಮರ್ಥ್ಯ ತಮ್ಮಲ್ಲಿದೆ ಅನ್ನೋದನ್ನು ಪ್ರತೀ ಚಿತ್ರದಲ್ಲೂ ಸಾಬೀತುಪಡಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: 'ಆಟೋದಲ್ಲಿ ಸೈಫ್ ನೋವು ಅನುಭವಿಸಿದ್ದರು': ಆಸ್ಪತ್ರೆಯಲ್ಲಿ ನಟನನ್ನು ಭೇಟಿಯಾದ ಚಾಲಕ ಹೇಳಿದ್ದೇನು?
ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಾ ಕಾಣಿಸಿಕೊಂಡಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. ಅಶುತೋಷ್ ರಾಣಾ, ದಿವ್ಯಾ ದತ್ತಾ ಮತ್ತು ನೀಲ್ ಭೂಪಾಲಂ ಅವರಂತಹ ಹಿರಿಯ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದು, ದೃಶ್ಯಗಳ ತೂಕ ಹೆಚ್ಚಿಸುವ ಭರವಸೆ ಇದೆ. ಜೊತೆಗೆ ಕ್ಯಾಮರಾ ಮ್ಯಾನ್ ಸೌರಭ್ ಗೋಸ್ವಾಮಿ ಅವರ ದೃಶ್ಯಗಳು, ಮನೀಶ್ ಪ್ರಧಾನ್ ಅವರ ಸಂಕಲ ಸಿನಿಮಾ ಸುತ್ತಲಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಬಿಗ್ ಸ್ಕ್ರೀನ್ನಲ್ಲಿ ಸಿನಿಮಾ ಕಣ್ತುಂಬಿಕ್ಕೊಳ್ಳಲು ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿದ್ದಾರೆ.