ಬೆಂಗಳೂರು: ದುಲೀಪ್ ಟ್ರೋಫಿ ಮೊದಲ ಪಂದ್ಯದ ಇಂಡಿಯಾ ಎ ತಂಡದ ಬೌಲರ್‌ಗಳ ಮೇಲುಗೈ ನಡುವೆಯೂ ಮೊದಲ ದಿನದಾಟದ ಅಂತ್ಯಕ್ಕೆ ಇಂಡಿಯಾ ಬಿ ತಂಡ 7 ವಿಕೆಟ್‌ಗಳ ನಷ್ಟಕ್ಕೆ 202 ರನ್ ಕಲೆಹಾಕಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಇಂಡಿಯಾ ಎ ತಂಡದ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ ಮುಶೀರ್ ಖಾನ್ ಅಜೇಯ ಶತಕ (105*) ದಾಖಲಿಸಿ ಮುಂದಿನ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ಬಿ ತಂಡದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ 30, ಹಾಗೂ ನಾಯಕ ಅಭಿಮನ್ಯು ಈಸ್ವರನ್ 13 ರನ್ ಗಳಿಸಿದ್ದನ್ನ ಹೊರತುಪಡಿಸಿದರೆ ಬೇರೆ ಯಾವ ಆಟಗಾರರೂ ಎರಡಂಕಿ ಮೊತ್ತ ಕಲೆ ಹಾಕಲಿಲ್ಲ. ಸರ್ಫರಾಜ್ ಖಾನ್, ರಿಷಭ್ ಪಂತ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ನಿರಾಸೆ ಮೂಡಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮೂಲಕ ದುಲೀಪ್ ಟ್ರೋಫಿಗೆ ಪಾದಾರ್ಪಣೆ ಮಾಡಿದ ಮುಶೀರ್ ಖಾನ್ ತಂಡಕ್ಕೆ ಆಸರೆಯಾದರು. 8ನೇ ವಿಕೆಟ್‌ಗೆ ಜೊತೆಯಾದ ನವದೀಪ್ ಸೈನಿ ಜೊತೆಗೂಡಿದ ಮುಶೀರ್, ದಿನದಾಟದ ಅಂತ್ಯದ ವೇಳೆಗೆ ಬಿರುಸಿನ ಆಟವಾಡಿ ಶತಕ ಪೂರೈಸಿದರು. ಇಂಡಿಯಾ ಎ ಪರ ಆಕಾಶ್ ದೀಪ್, ಖಲೀಲ್ ಅಹಮದ್ ಹಾಗೂ ಆವೇಶ್ ಖಾನ್ ತಲಾ 2 ವಿಕೆಟ್ ಪಡೆದರು.
ಸರ್ಫರಾಜ್ ಮತ್ತು ಪಂತ್ ವಿಫಲ:ಈ ಪಂದ್ಯದಲ್ಲಿಮುಶೀರ್ ಖಾನ್ ಅವರ ಹಿರಿಯ ಸಹೋದರ ಸರ್ಫರಾಜ್ ಖಾನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 35 ಎಸೆತಗಳಲ್ಲಿ 9 ರನ್ ಗಳಿಸಿ ಅವೇಶ್ ಖಾನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇದಲ್ಲದೇ ಅಪಘಾತದ ಬಳಿಕ ಮೊದಲ ರೆಡ್ ಬಾಲ್ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದ ರಿಷಭ್ ಪಂತ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೇ 10 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.