ಮಂಗಳೂರು : ನಗರದ ಮಾರ್ಗನ್ಸ್ ಗೇಟ್ ಜಂಕ್ಷನ್‌ನಿಂದ ಎಂಪಾಸಿಸ್ ಮುಂಭಾಗದ ರಸ್ತೆಗೆ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ರಸ್ತೆ ಎಂದು ನಾಮಕರಣ ಮಾಡಲು ಮಂಗಳೂರು ಪಾಲಿಕೆ ನಿರ್ಣಯಿಸಿದೆ. ಈ ನಿರ್ಧಾರಕ್ಕೆ ಸಿಪಿಎಂ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರ ಕೈಬಿಡುವಂತೆ ಆಗ್ರಹಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯ ಜನವರಿ ತಿಂಗಳ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತು. ಇದೀಗ ಈ ಬಗ್ಗೆ ಆಕ್ಷೇಪವಿದ್ದಲ್ಲಿ ಮನಪಾ ಕಚೇರಿಗೆ ತಿಂಗಳ ಒಳಗೆ ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮನಪಾ ಮೇಯರ್ ಮನೋಜ್ ಕುಮಾರ್ ಮಾತನಾಡಿ, "ಪಾಲಿಕೆಯ ವ್ಯಾಪ್ತಿಯ ರಸ್ತೆ, ಸರ್ಕಲ್‌ಗಳಿಗೆ ಹೆಸರಿಡಲು ಕಾರ್ಪೊರೇಟರ್ ಅಥವಾ ಸಂಘ-ಸಂಸ್ಥೆಗಳಿಂದ ಮನವಿ ಬಂದಲ್ಲಿ ಅದನ್ನು ನಾವು ಕೌನ್ಸಿಲ್, ಸಮಿತಿ ಮುಂದೆ ಇಡುತ್ತೇವೆ. ಅದೇ ರೀತಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಹೆಸರಿಡುವಂತೆ ವಿನಂತಿಸಿದ್ದರು. ಇದನ್ನು ಕೌನ್ಸಿಲ್ ನಲ್ಲಿ ಮಂಡಿಸಲಾಗಿತ್ತು. ಆದರೆ, ಸದಸ್ಯರು ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಇದಕ್ಕೆ ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಆಕ್ಷೇಪಣೆಯಿದ್ದಲ್ಲಿ ತಿಳಿಸುವಂತೆ ಸೂಚಿಸುತ್ತೇವೆ. ಆದರೆ ಈವರೆಗೆ ನಮಗೆ ಯಾವುದೇ ಲಿಖಿತ ರೂಪದಲ್ಲಿ ಆಕ್ಷೇಪಣೆ ಬಂದಿಲ್ಲ" ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, "ಕರಾವಳಿಯ ರಾಜಕಾರಣಕ್ಕೆ ಘನತೆ ತಂದ ನಾಗಪ್ಪ ಆಳ್ವ, ಸುಬ್ಬಯ್ಯ ಶೆಟ್ಟಿ, ಬಿ. ಎ. ಮೊಯ್ದಿನ್ ಮುಂತಾದ ಧೀಮಂತ ಮಾಜಿ ಶಾಸಕರ, ಸಚಿವರ ಹೆಸರುಗಳನ್ನು ಇಡಬಹುದಿತ್ತು. ಅದು ಬಿಟ್ಟು ರಿಯಲ್ ಎಸ್ಟೇಟ್ ಉದ್ಯಮಿಯ ಹೆಸರು ರಸ್ತೆಗೆ ನಾಮಕರಣ ಮಾಡುವುದು ಸರಿಯಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ಈ ಹೆಸರನ್ನು ತಿರಸ್ಕರಿಸಬೇಕು. ಈಗಲೂ ಸಕ್ರಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೃಷ್ಣ ಪಾಲೆಮಾರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಕಾರಣವೇನು? ಎರಡು ಅವಧಿಗೆ ಶಾಸಕರಾದದ್ದೇ?, ದುಡ್ಡಿನ ರಾಜಕಾರಣವನ್ನು ಮಂಗಳೂರಿನ ರಾಜಕಾರಣಕ್ಕೆ ಪರಿಚಯಿಸಿದ್ದೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಗರದ ರಸ್ತೆಗೆ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಹೆಸರು ನಾಮಕರಣ ವಿಚಾರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಜನನ ಪ್ರಮಾಣ ಪತ್ರದಲ್ಲಿನ ಹೆಸರು ಬದಲಾವಣೆ ಕುರಿತು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ