ಮೈಸೂರು : ನಗರದಲ್ಲಿ ಉದ್ಯಮಿಯೊಬ್ಬರು ಸಾಲಕ್ಕೆ ಹೆದರಿ ತನ್ನ ಹೆಂಡತಿ, ಮಗ ಹಾಗೂ ತಾಯಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಮಾಸುವ ಮುನ್ನವೇ ದಂಪತಿ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮನೆಯ ಮೇಲೆ ಸಾಲ ಮಾಡಿ ಆ ಹಣವನ್ನು ಆನ್ಲೈನ್ ಬೆಟ್ಟಿಂಗ್ ನಲ್ಲಿ ಕಳೆದುಕೊಂಡು, ಸಾಲಗಾರರಾದ ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಜೋಷಿ ಆಂಟೋನಿ (38) , ತಮ್ಮ ಜೋಬಿ ಆಂಟೋನಿ, ಈತನ ಪತ್ನಿ ಶರ್ಮಿಳಾ ಅಲಿಯಾಸ್ ಸ್ವಾತಿ (32) ಮೃತರು.
ಪ್ರಕರಣ ಹಿನ್ನೆಲೆ : ಜೋಷಿ ಆಂಟೋನಿ ಹಾಗೂ ಜೋಬಿ ಆಂಟೋನಿ ಅವಳಿ ಸಹೋದರರು. ಸೋಮವಾರ (ಫೆ.17) ಅಣ್ಣ ಜೋಷಿ ಆಂಟೋನಿ ಆತ್ಮಹತ್ಯೆ ಮಾಡಿಕೊಂಡರೆ, ಇಂದು ತಮ್ಮ ಜೋಬಿ ಆಂಟೋನಿ ಮತ್ತು ಆತನ ಹೆಂಡತಿ ಸ್ವಾತಿ ಸಾವಿನ ಹಾದಿ ಹಿಡಿದಿದ್ದಾರೆ.
ಅಣ್ಣ ಜೋಶಿ ಆಂಟೋನಿ ಇದ್ದ ಮನೆಯ ಹೆಸರಿನಲ್ಲಿ ಸಾಲ ಮಾಡಿಕೊಂಡಿದ್ದ ಜೋಬಿ ಆಂಟೋನಿ ದಂಪತಿ, ಆನ್ಲೈನ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದರು. ಹೀಗಾಗಿ ಸಾಲಗಾರರು ಮನೆಯ ಬಳಿ ಬಂದು ಸಾಲ ಮರುಪಾವತಿಗೆ ಕೇಳಿದಾಗಲೇ ಜೋಶಿ ಆಂಟೋನಿಗೆ ಈ ವಿಷಯ ತಿಳಿದಿದೆ. ಇದರಿಂದ ಮನನೊಂದು ಜೋಶಿ ಆಂಟೋನಿ ವಿಡಿಯೋ ಮಾಡಿ , ನನ್ನ ಸಾವಿಗೆ ತಮ್ಮ ಹಾಗೂ ತಮ್ಮನ ಹೆಂಡತಿ ಕಾರಣವೆಂದು ಹೇಳಿಕೆ ನೀಡಿ, ಅದೇ ವಿಡಿಯೋವನ್ನು ತನ್ನ ತಂಗಿಗೂ ಕಳುಹಿಸಿದ್ದರು.
ಸಹೋದರಿಯಿಂದ ದೂರು ; ಅಣ್ಣ ಜೋಷಿ ಆಂಟೋನಿ ಸಾವಿಗೆ ಜೋಬಿ ಆಂಟೋನಿ ಹಾಗೂ ಆತನ ಪತ್ನಿಯ ಪ್ರಚೋದನೆ ಕಾರಣವೆಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಸಹೋದರಿ ಮೇರಿ ಶೆರ್ಲಿನ್ ದೂರು ನೀಡಿದ್ದರು.

ತಂಗಿ ಮೇರಿ ಹೇಳಿದ್ದೇನು ? ''ಜೋಶಿ ಹಾಗೂ ಜೋಬಿ ಇಬ್ಬರು ಅವಳಿ ಜವಳಿ. ನಿನ್ನೆ ಜೋಶಿ ಆಟೋನಿ ಆತ್ಮಹತ್ಯೆ ಮಾಡಿಕೊಂಡರು, ಇವತ್ತು ತಮ್ಮ ಜೋಬಿ ಹಾಗೂ ಹೆಂಡತಿ ಸ್ವಾತಿ ಆತ್ಮಹತ್ಯೆಗೆ ಶರಣಾಗಿಒದ್ದಾರೆ. ಸ್ವಾತಿ ತುಂಬಾ ಸಾಲ ಮಾಡಿಕೊಂಡಿದ್ದಾಳೆ, ಆನ್ ಲೈನ್ ಗೇಮಿಂಗ್ ಮತ್ತು ಇನ್ವೆಸ್ಟ್ಮೆಂಟ್ ಹೆಸರಲ್ಲಿ ಹೂಡಿಕೆ ಮಾಡಿ, ಲಾಸ್ ಆಗಿ ಸಾಲ ಮಾಡಿದ್ದಾಳೆ. 20 ಲಕ್ಷ ರೂಪಾಯಿಯನ್ನು ಬೆಟ್ಟಿಂಗ್ ಆಟದಲ್ಲಿ ಕಳೆದುಕೊಂಡಿದ್ದಾರೆ.
ಜೋಬಿ ಮತ್ತು ಹೆಂಡತಿ ಸ್ವಾತಿ ಕಳೆದ ಆರು ತಿಂಗಳಿಂದ ಬೇರೆ ಮನೆ ಮಾಡಿಕೊಂಡು ಇದ್ದರು. ನಮ್ಮ ಮನೆಯಲ್ಲಿರುವಾಗಲೇ ಸಾಲ ಮಾಡಿದ್ದಾರೆ. ಹೀಗಾಗಿ ಸಾಲಗಾರರು ನಮ್ಮ ಮನೆಯ ಬಳಿ ಬಂದು ಕೇಳುತ್ತಿದ್ದರು. ಈ ಕುರಿತಂತೆ ನಾವು ಜೋಬಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದರೂ ಸಹ ಉತ್ತರಿಸುತ್ತಿರಲಿಲ್ಲ. ಇದಕ್ಕಾಗಿ ಮನ ನೊಂದ ಜೋಶಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಅದಕ್ಕಾಗಿ ನಾನು ಜೋಬಿ ಮತ್ತು ಅವನ ಹೆಂಡತಿ ಮೇಲೆ ದೂರು ನೀಡಿದ್ದೆ.
ಇವರು ಮಾಡಿರುವ ಸಾಲಕ್ಕೆ ನಮ್ಮ ಮನೆ ಬಳಿ ಬಂದು ಸಾಲಗಾರರು ಸಾಲ ಕೇಳುತ್ತಿದ್ದರು. ಹೀಗಾಗಿ ನನಗೆ ಬೇಜಾರಾಗಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂದಾಜು 80 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು'' ಎಂದು ಕಣ್ಣೀರಿಡುತ್ತಾ ಮೇರಿ ಹೇಳಿದರು.
ಪೊಲೀಸರು ಬಂಧಿಸುತ್ತಾರೆಂದು ಹೆದರಿ, ವಿಜಯನಗರ ವಾಟರ್ ಟ್ಯಾಂಕ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ, ಶವಗಳನ್ನು ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಸ್ನೇಹಿತ ಶಾಂತಕುಮಾರ್ ಹೇಳಿದ್ದು ಹೀಗೆ ; ''ನಾವು ಇಬ್ಬರು ಜತೆಗೆ ಆಡಿ ಬೆಳೆದವರು. ಸಾಲ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಮನೆ ಬಳಿ ಸಾಲದವರು ಬಂದು ಕೇಳಿದಾಗ ಅಣ್ಣ ಜೋಬಿಗೆ ತಿಳಿದಿದೆ. ವಿಜಯನಗರದಲ್ಲೇ 40 ವರ್ಷದಿಂದ ವಾಸವಿದ್ದರು. ಅಣ್ಣ-ತಮ್ಮ ಇಬ್ಬರು ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಅಣ್ಣ ಜೋಷಿ ನನ್ನ ಸಾವಿಗೆ ತಮ್ಮ ಜೋಬಿ ಆಂಟೋನಿ ಕಾರಣ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆ ಬಳಿ ಸಾಲದವರು ಬಂದು ಅವಮಾನ ಮಾಡಿದರು ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾನೆ. ಇದರಿಂದ ತಂಗಿ ಮೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಕಾರಣ , ಅಣ್ಣನ ಶವ ನೋಡಲು ಸಹ , ತಮ್ಮ ಜೋಬಿ ಬಂದಿರಲಿಲ್ಲ. ಇಂದು ಬೆಳಗ್ಗೆ ತಮ್ಮ ಜೋಬಿ ಹಾಗೂ ಅವನ ಪತ್ನಿ ಸ್ವಾತಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೋಷಿ ಯಾರ ಬಳಿಯೂ ಒಂದು ರೂಪಾಯಿ ಸಾಲ ಮಾಡಿದವನಲ್ಲ. ಆತ ಕಳೆದ ಒಂದು ವರ್ಷದಿಂದ ಬೇರೆ ಮನೆ ಮಾಡಿದ್ದ. ಹೀಗಾಗಿ ಅವನು ಸಾಲ ಮಾಡಿಕೊಂಡಿರುವ ಸಂದೇಹ ಇದೆ'' ಎಂದು ಸ್ನೇಹಿತ ಶಾಂತಕುಮಾರ್ ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂ ಓದಿ: ಮೈಸೂರು: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ