ಹೈದರಾಬಾದ್:ಯಾವುದೇ ಬ್ಯಾಟ್ಸ್ಮನ್ ಆದರೂ, ಡಕ್ ಔಟ್ ಮಾತ್ರ ಆಗಬಾರದು ಎಂದು ಕಣಕ್ಕಿಳಿಯುತ್ತಾರೆ. ಸೊನ್ನೆಗೆ ವಿಕೆಟ್ ನೀಡುವುದು ಅವಮಾನಕರ ಸಂಗತಿ. ದುರಾದೃಷ್ಟವಶಾತ್ ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆದರೆ, ನಿಂದನೆಗೂ ಒಳಗಾಗಬೇಕಾಗುತ್ತದೆ.
ಸೊನ್ನೆ ಎನ್ನುವುದು ಸಂಖ್ಯೆಯಲ್ಲಿ ಅತಿ ಮಹತ್ವದ್ದೇ. ಆದರೆ, ಕ್ರಿಕೆಟ್ನಲ್ಲಿ ಅದರ ಮುಂದೆ ಅಂಕಿಗಳಿರುವುದು ಅತಿ ಮುಖ್ಯ. ಡಕ್ ಔಟ್ ಆಗಿ ಪೆವಿಲಿಯನ್ಗೆ ಬ್ಯಾಟರ್ ನಡೆದರೆ, ಹಂಗಿಸುವವರು ನೂರಾರು. ಶತಾಯಗತಾಯ ರನ್ ಕಲೆಹಾಕಲು ದಾಂಡಿಗರು ಪ್ರಯತ್ನಿಸುತ್ತಿರುತ್ತಾರೆ.
ಆದಾಗ್ಯೂ, ಅದೃಷ್ಟ ಕೆಟ್ಟು ಸೊನ್ನೆಗೆ ಔಟಾದವರ ಪಟ್ಟಿ ಹನುಮನ ಬಾಲದಂತೆ ಉದ್ದಕ್ಕಿದೆ. ಅದರಲ್ಲೂ ವಿಶ್ವಮಾನ್ಯ ಕ್ರಿಕೆಟಿಗರನ್ನೂ ಈ 'ಸೊನ್ನೆಯ ಭೂತ' ಬಿಟ್ಟಿಲ್ಲ. ಹೊಡಿಬಡಿ ಆಟವಾದ ಟಿ20ಯಲ್ಲಿ ಇದರ ಕರಾಮತ್ತು ಜೋರಾಗಿಯೇ ಇದೆ. ರನ್ ಗಳಿಸುವ ಒತ್ತಡದಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಲು ಆಟಗಾರರು ಮುಂದಾಗುತ್ತಾರೆ. ಈ ವೇಳೆ ವಿಕೆಟ್ ನೀಡುವ ಸಂಭವ ಹೆಚ್ಚಿರುತ್ತದೆ.
ಐಪಿಎಲ್ನಲ್ಲಿ ಟಾಪ್ನಲ್ಲಿರುವ ಸೊನ್ನೆವೀರರು:ಐಪಿಎಲ್ ಹಂಗಾಮದಲ್ಲಿ ಸೊನ್ನೆಗೆ ಔಟಾದವರೂ ಇದ್ದಾರೆ. ನಿಮಗೆ ಗೊತ್ತಾ, ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಸೊನ್ನೆ ಸುತ್ತಿದವರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಅಚ್ಚರಿಯಾದ್ರೂ, ಹೌದು. ಡ್ಯಾಶಿಂಗ್ ಆಟಗಾರ ಮೊದಲ ಎಸೆತವನ್ನೇ ಕೆಣಕಲು ಹೋಗಿ ಈವರೆಗೆ 17 ಬಾರಿ 'ಡಕ್' ಔಟ್ ಆಗಿದ್ದಾರೆ ಎಂಬುದು ಸೋಜಿಗ.
ಇವರ ಜೊತೆಗೆ ಆರ್ಸಿಬಿಯ ಫಿನಿಶರ್ ಆಗಿರುವ ದಿನೇಶ್ ಕಾರ್ತಿಕ್, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ 17 ಬಾರಿ ಖಾತೆ ತೆರೆಯದೇ ವಿಕೆಟ್ ನೀಡಿದ ಕುಖ್ಯಾತಿಗೆ ಭಾಜನರಾಗಿದ್ದಾರೆ.