Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ.
ಈಗಾಗಲೇ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ಜಡೇಜಾ ಸೇರಿದಂತೆ ಹಲವಾರು ಸ್ಟಾರ್ ಆಟಗಾರರು ರಣಜಿ ಪಂದ್ಯಗಳನ್ನು ಆಡುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಕಣಕ್ಕಿಳಿಯಲು ಸಿದ್ಧವಾಗಿದ್ದಾರೆ. ಇದೇ ತಿಂಗಳು ಅಂದರೆ ಜನವರಿ 30, ರಿಂದ ಫೆಬ್ರವರಿ 2 ವರೆಗೆ ನಡೆಯಲಿರುವ ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವಿನ ಪಂದ್ಯದಲ್ಲಿ ದೆಹಲಿ ಪರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕಾಗಿ ಈಗಿನಿಂದಲೇ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಕೂಡ ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕೊಹ್ಲಿ ಕಣಕ್ಕಿಳಿಯುತ್ತಿರುವ ಕಾರಣ ಈ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
13 ವರ್ಷ ಬಳಿಕ ರಣಜಿ ಕಣಕ್ಕೆ: 13 ವರ್ಷದ ಬಳಿಕ ಕೊಹ್ಲಿ ರಣಜಿ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಮೈದಾನಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಂದಾಜಿಸಿದೆ. 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಹೆಚ್ಚಿನ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ, ಈ ಪಂದ್ಯ ನೋಡಲು ಆಗಮಿಸುವ ಎಲ್ಲರಿಗೂ ಉಚಿತ ಪ್ರವೇಶ ಘೋಷಿಸಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿದ್ದ ಕೊಹ್ಲಿ ಕಳಪೆ ಪ್ರದರ್ಶನ ತೋರಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೆಯ 8 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್ನಿಂದ 283 ರನ್ಗಳು ಮಾತ್ರ ಹರಿದು ಬಂದಿದ್ದವು. ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಅವರು ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ತಮ್ಮ ಫಾರ್ಮ್ ಮರಳಿ ಪಡೆಯಲು ಮುಂದಾಗಿದ್ದಾರೆ. ಆದ್ದರಿಂದ ರಣಜಿ ಮೂಲಕ ಅಭ್ಯಾಸವನ್ನು ಆರಂಭಿಸಿದ್ದಾರೆ.
ರಣಜಿ ಬಳಿಕ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.
2012ರಲ್ಲಿ ಕೊನೆಯ ರಣಜಿ: ಈ ಹಿಂದೆ ವಿರಾಟ್ ಕೊಹ್ಲಿ 2012ರಲ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯ ಆಡಿದ್ದರು. ಆದರೆ ಎರಡೂ ಇನ್ನಿಂಗ್ಸ್ಗಳಲ್ಲಿ ಆಡಿದ್ದ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಮೊದಲ ಇನಿಂಗ್ಸ್ನಲ್ಲಿ 14 ರನ್ ಗಳಿಗೆ ಪೆವಿಲಿಯನ್ ಸೇರಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ 43ರನ್ ಗಳಿಸಿ ನಿರ್ಗಮಿಸಿದ್ದರು. ಇದಾದ ಬಳಿಕ ರಣಜಿಗೆ ಹಿಂತಿರುಗಿದಿಲ್ಲ. ಸುದೀಘ ಕಾಲದ ಬಳಿಕ ರಣಜಿಗೆ ಕಮ್ ಬ್ಯಾಕ್ ಮಾಡಿರುವ ಕೊಹ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಬಿಗಿ ಭದ್ರತೆ: ವಿರಾಟ್ ಕೊಹ್ಲಿ ರಣಜಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಹೆಚ್ಚಿನ ಭದ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತುದೆ.
ಇದನ್ನೂ ಓದಿ: ಗಂಭೀರ್ ಸ್ಥಾನಕ್ಕೆ ಕುತ್ತು! ಕೋಚ್ ಆಗಿ ಇದೇ ಅವರಿಗೆ ಕೊನೆಯ ಅವಕಾಶ