ಬೆಳಗಾವಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೂಲಿ-ನಾಲಿ ಮಾಡಿಕೊಂಡೇ ಬದುಕಿನ ಬಂಡಿ ಸಾಗಿಸಬೇಕು. ಇಂಥ ಬಡವರನ್ನೇ ಗುರಿಯಾಗಿಸಿಕೊಂಡ ಮಧ್ಯವರ್ತಿಯೊಬ್ಬ ಸಬ್ಸಿಡಿ ಆಸೆ ತೋರಿಸಿ, ಸಾಲದ ಖೆಡ್ಡಾಕ್ಕೆ ಕೆಡವಿರುವ ಆರೋಪ ಬೈಲಹೊಂಗಲ ತಾಲ್ಲೂಕಿನ ಗಜಮಿನಾಳ ಗ್ರಾಮದಲ್ಲಿ ಕೇಳಿಬಂದಿದೆ. ಈ ಕುರಿತು ಈಟಿವಿ ಭಾರತದ ಪ್ರತ್ಯಕ್ಷ ವರದಿ ಇಲ್ಲಿದೆ.
ಸಾಲದ ಕೂಪಕ್ಕೆ ಸಿಲುಕಿದ ಬೈಲಹೊಂಗಲ ತಾಲ್ಲೂಕಿನ ಗಜಮಿನಾಳ ಗ್ರಾಮದ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಸರ್ಕಾರ ದಯವಿಟ್ಟು ನಮ್ಮ ಸಹಾಯಕ್ಕೆ ಧಾವಿಸಬೇಕು. ಇಲ್ಲದಿದ್ದರೆ ನಾವು ಬದುಕುವುದೇ ದುಸ್ತರವಾಗುತ್ತದೆ ಎಂದು ಗಜಮಿನಾಳ ಸಂತ್ರಸ್ತರು ಅಲವತ್ತುಕೊಂಡಿದ್ದಾರೆ. ಆ ಮಧ್ಯವರ್ತಿ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆ ಸೇರಿ ಮತ್ತಿತರ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಸದ್ಯ ಆತ ಜೈಲು ಪಾಲಾಗಿದ್ದಾನೆ.
ಬೆಳಗಾವಿಯ ಯಮನಾಪುರ ನಿವಾಸಿ ಹೊಳೆಪ್ಪ ದಡ್ಡಿ ಎಂಬ ವ್ಯಕ್ತಿಯೇ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರಿಗೆ ವಂಚಿಸಿದ್ದಾನೆಂದು ಆರೋಪಿಸಲಾಗಿದೆ. ಗಜಮಿನಾಳ ಗ್ರಾಮದಲ್ಲಿ 200ಕ್ಕೂ ಅಧಿಕ ಮಹಿಳೆಯರಿಗೆ ನೀವು ಯಾವುದೇ ರೀತಿ ಸಾಲ ಮರು ಪಾವತಿ ಮಾಡುವಂತಿಲ್ಲ. ನಾನೇ ತುಂಬುತ್ತೇನೆ. ನಿಮಗೆ ಸಬ್ಸಿಡಿ ಹಣ ಬರುತ್ತದೆ ಎಂದು ಹೇಳಿ, ಫೈನಾನ್ಸ್ಗಳಿಂದ ಸಾಲ ಪಡೆದು ಅದರಲ್ಲಿ ಒಂದಿಷ್ಟು ಹಣವನ್ನು ನಮಗೆ ಕೊಟ್ಟಿದ್ದಾನೆ. ಹೀಗೆ ನಾವೇನು ತುಂಬುವುದಿಲ್ಲ, ನಮಗೆ ಸಬ್ಸಿಡಿ ಹಣ ಸಿಗುತ್ತೆ ಎಂದು ಆಸೆಗೆ ಬಿದ್ದು ಒಂದಲ್ಲ, ಎರಡಲ್ಲ, ಐದಾರು ಸಂಘಗಳಲ್ಲಿ ಸಾಲ ಪಡೆದೆವು. ಈಗ ನೋಡಿದರೆ ನಮಗೆ ವಂಚಿಸಿದವ ಕೈ ಎತ್ತಿದ್ದಾನೆ. ಫೈನಾನ್ಸ್ನವರು ನಿಮ್ಮ ಹೆಸರಲ್ಲಿ ಸಾಲವಿದ್ದು, ಸಾಲದ ಕಂತು ತುಂಬುವಂತೆ ಮನೆಗೆ ದುಂಬಾಲು ಬಿದ್ದಿದ್ದಾರೆ. ಪ್ರತಿ ತಿಂಗಳು 30 ಸಾವಿರಕ್ಕೂ ಅಧಿಕ ಹಣ ತುಂಬಬೇಕು. ನಾವು ಎಲ್ಲಿಂದ ದುಡ್ಡು ತರೋದು ಎನ್ನುವುದು ಸಂತ್ರಸ್ತರ ಅಳಲಾಗಿದೆ.
ಗಜಮಿನಾಳದಲ್ಲಿ ಸಾಲಕ್ಕೆ ಹೆದರಿ 50ಕ್ಕೂ ಅಧಿಕ ಕುಟುಂಬಗಳು ಮನೆಗೆ ಕೀಲಿ ಜಡಿದು ಊರು ಬಿಟ್ಟಿದ್ದು, ಇನ್ನುಳಿದವರು ಸಾಲದ ಚಿಂತೆಯಲ್ಲೇ ದಿನ ದೂಡುವಂತಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂತ್ರಸ್ತೆ ಕಸ್ತೂರಿ ಅಡಿವೆಪ್ಪ ದಂಡಾಪುರ, "ಸಬ್ಸಿಡಿ ಸಿಗುತ್ತೆ ಎಂದು ಯಮನಾಪುರದ ಹೊಳೆಪ್ಪ ದಡ್ಡಿ ನಮಗೆ ಆಸೆ ತೋರಿಸಿದ. ಇದರಿಂದ ನನ್ನ ಹೆಸರಿನಲ್ಲಿ 7 ಮತ್ತು ನಮ್ಮ ಅತ್ತೆ ಹೆಸರಿನಲ್ಲಿ 4 ಸಂಘಗಳಲ್ಲಿ ಸಾಲ ತೆಗೆದುಕೊಂಡಿದ್ದೇನೆ. ಇದರಲ್ಲಿ ಒಂದೊಂದು ಸಂಘದಲ್ಲಿ 60 ಸಾವಿರ ರೂ. ಸಾಲದ ಪೈಕಿ ನಮಗೆ 15, 12 ಸಾವಿರ ರೂ. ಮಾತ್ರ ಕೊಟ್ಟಿದ್ದು, ಇನ್ನುಳಿದ ಹಣವನ್ನು ಆ ಹೊಳೆಪ್ಪನೇ ತೆಗೆದುಕೊಂಡಿದ್ದಾನೆ. 24 ಕಂತು ನಾನೇ ತುಂಬುತ್ತೇನೆ ಎಂದು ಹೇಳಿ ಈಗ ನಮಗೆ ಮೋಸ ಮಾಡಿದ್ದಾನೆ. ಅದರಲ್ಲಿ ಫಸ್ಟ್ ಪಾರ್ಟಿ ನಮ್ಮನ್ನು ಮಾಡಿ, ತಾನು ಸೆಕೆಂಡ್ ಪಾರ್ಟಿ ಎಂದು ಮಾಡಿಸಿ ಐದನೂರು ರೂ. ಬಾಂಡ್ ಕೊಟ್ಟಿದ್ದ. ಫೈನಾನ್ಸ್ನವರು ರಾತ್ರಿ-ಹಗಲು ಎನ್ನದೇ ಮನೆಗೆ ಬರುತ್ತಿದ್ದಾರೆ. ಪ್ರತಿ ತಿಂಗಳು 30 ಸಾವಿರ ರೂ. ತುಂಬಬೇಕು. ಕೂಲಿ ಮಾಡಿ ಅಷ್ಟು ಹಣವನ್ನು ಹೇಗೆ ತುಂಬುವುದು? ಇದನ್ನೇ ತಲೆಗೆ ಹಚ್ಚಿಕೊಂಡು ನಮ್ಮ ಮಾವ ಬಿಪಿ, ಶುಗರ್ ಹೆಚ್ಚಾಗಿ ಈಗ 15 ದಿನಗಳ ಹಿಂದೆ ತೀರಿಕೊಂಡರು" ಎಂದು ತಮ್ಮ ಸಂಕಷ್ಟ ತೋಡಿಕೊಂಡರು.
"ನಾನು, ನನ್ನ ಗಂಡ ಮತ್ತು ಅತ್ತೆ ಮೂರು ಮಂದಿ ದುಡಿದರೂ ಅಷ್ಟು ಹಣ ಹೊಂದಿಸಲು ನಮಗೆ ಆಗುವುದಿಲ್ಲ. ಫೈನಾನ್ಸ್ನವರು ನೀವು ಏನು ಮಾಡುತ್ತೀರಿ ನಮಗೆ ಗೊತ್ತಿಲ್ಲ. ಸಾಲದ ಕಂತು ತುಂಬಲೇಬೇಕು ಎಂದು ಪೀಡಿಸುತ್ತಿದ್ದಾರೆ. ಮಹಿಳೆಯರು ಅಂತಾನೂ ನೋಡದೆ, ನೇರವಾಗಿ ಮನೆಯೊಳಗೆ ಬಂದು ಕುಳಿತುಕೊಳ್ಳುತ್ತಾರೆ. ಸಾಯುವ ಪರಿಸ್ಥಿತಿ ನಮಗೆ ಬಂದಿದೆ. ತಕ್ಷಣ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮಗೆ ಮೋಸ ಮಾಡಿರುವ ಹೊಳೆಪ್ಪನಿಂದ ಹಣ ವಸೂಲಿ ಮಾಡಿ, ನಮ್ಮ ಸಾಲ ತೀರಿಸಬೇಕು" ಎಂದು ಕಸ್ತೂರಿ ದಂಡಾಪುರ ಒತ್ತಾಯಿಸಿದರು.
"ಸಬ್ಸಿಡಿ ಅಂತಾ ಹೇಳಿದರು. ಹಾಗಾಗಿ, ಜಾನುವಾರು ಖರೀದಿಸಬೇಕು. ಮಕ್ಕಳ ಶಾಲೆಯ ಖರ್ಚಿಗೆ ಅನುಕೂಲ ಆಗುತ್ತದೆ ಎಂದು 4 ಸಂಘಗಳಲ್ಲಿ ಸಾಲ ತೆಗೆದುಕೊಂಡಿದ್ದೇನೆ. ಈಗ ನೋಡಿದರೆ ಸಂಘದವರು ಸಾಲ ತುಂಬುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಾಲದ ಹಣ ತುಂಬಲು ದುಡಿಯೋಕೆ ಹೋದಾಗ ನನ್ನ ಗಂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ನನಗೆ ನಾಲ್ಕು ಚಿಕ್ಕ ಮಕ್ಕಳಿವೆ. ಅವರಿಗೆ ಹೊಟ್ಟೆಗೆ ಏನು ಹಾಕಲಿ? ಸಾಲ ಹೇಗೆ ತುಂಬಲಿ ಅಂತಾನೇ ಗೊತ್ತಾಗುತ್ತಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು" ಅನ್ನೋದು ಮಲ್ಲವ್ವ ಕರೆಪ್ಪ ದಂಡಾಪುರ ಅವರ ನೋವಿನ ಮಾತು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾಹಿತಿ ನೀಡಿದ್ದು, "ಆರೋಪಿ ಹೊಳೆಪ್ಪ ದಡ್ಡಿಯನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಳಿಸಿದ್ದೇವೆ. ಕಾಕತಿ ಮತ್ತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿವೆ. ಕಾಕತಿ ಠಾಣಾ ವ್ಯಾಪ್ತಿಯಲ್ಲಿ 16,700 ಮತ್ತು ಮಾಳ ಮಾರುತಿ ಠಾಣೆಯಲ್ಲಿ 19 ಸಾವಿರ ಜನರಿಗೆ ಸಬ್ಸಿಡಿ ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ಎಷ್ಟು ಜನರಿಗೆ ಮೋಸ ಆಗಿದೆ ಎಂಬ ಕುರಿತು ವಿಚಾರಿಸುತ್ತಿದ್ದೇವೆ. ಮೈಕ್ರೋ ಫೈನಾನ್ಸ್ನವರ ಜೊತೆಗೂ ಇಂದು ಸಭೆ ಮಾಡುತ್ತಿದ್ದೇನೆ" ಎಂದು ಮಾಹಿತಿ ನೀಡಿದರು.
ಸಬ್ಸಿಡಿ ಹೆಸರಲ್ಲಿ ಮೋಸ ಮಾಡಿರುವ ಆರೋಪಿ ಹೊಳೆಪ್ಪ ದಡ್ಡಿ ಸದ್ಯ ಜೈಲಿನಲ್ಲಿ ಬಂಧಿಯಾಗಿದ್ದು, ಆತನ ಪತ್ನಿ ಮತ್ತು ಮಕ್ಕಳು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ: ಫೈನಾನ್ಸ್ನಿಂದ ಮನೆ ಜಪ್ತಿ ಆರೋಪ: ಗರ್ಭಿಣಿ ಸೇರಿ ಕುಟುಂಬಸ್ಥರು ಮನೆ ಹೊರಗೆ ವಾಸ!