ಹೈದರಾಬಾದ್ (ತೆಲಂಗಾಣ): ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ನಗರದ ಪ್ರಮುಖ ಪ್ರದೇಶದಲ್ಲಿ ತೆರೆದ ಕಾರಿನಲ್ಲಿ ತಮ್ಮ ನೆಚ್ಚಿನ ಕ್ರಿಕಟಿಗ ಸಿರಾಜ್ ಅವರನ್ನು ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಮೆರೆವಣಿಗೆ ಮಾಡಿ ಸಂಭ್ರಮಿಸಿದರು.
ಟಿ-20 ವಿಶ್ವಕಪ್ ಗೆದ್ದ ನಂತರ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ತವರು ಹೈದರಾಬಾದ್ಗೆ ಆಗಮಿಸಿದರು. ಶುಕ್ರವಾರ ಇಲ್ಲಿನ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಮೊಹಮ್ಮದ್ ಅವರು ಬಂದಿಳಿದರು. ಈ ವೇಳೆ, ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಕ್ರಿಕೆಟ್ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ವಿಶ್ವಕಪ್ ವಿಜೇತ ತಂಡದ ಸದಸ್ಯ ಬರುತ್ತಿರುವ ಕಾರಣಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸೈಬರಾಬಾದ್ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್, ಟಿ-20 ವಿಶ್ವಕಪ್ ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವಕಪ್ ಸ್ವೀಕರಿಸಿದ ದಿನವನ್ನು ಎಂದಿಗೂ ಮರೆಯುವುದಿಲ್ಲ. 11 ವರ್ಷಗಳಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಅವಿಸ್ಮರಣೀಯ ದಿನ. ನಾನು ಕೂಡ ಕ್ರಿಕೆಟ್ ತಂಡಕ್ಕಾಗಿ ತುಂಬಾ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕಾಗಿ ಇನ್ನಷ್ಟು ಸಾಧಿಸಬೇಕಿದೆ. ಹೆಚ್ಚಿನ ವಿಶ್ವಕಪ್‌ಗಳನ್ನು ತರುವುದೇ ಇಡೀ ತಂಡದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಕಾರಿನಲ್ಲಿ ಸಿರಾಜ್ ಮೆರೆವಣಿಗೆ: ನಂತರ ಮೆಹದಿಪಟ್ಟಣಂನಲ್ಲಿ ತೆರೆದ ಕಾರಿನಲ್ಲಿ ಸಿರಾಜ್ ವಿಜಯೋತ್ಸವದ ಪರೇಡ್ ನಡೆಸಿದರು. ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಮೆರೆವಣಿಗೆಯ ಉದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜೈಕಾರ ಹಾಕಿದರು. ಕಾರಿನಲ್ಲಿ ನಿಂತು ಸಿರಾಜ್ ಅಭಿಮಾನಿಗಳತ್ತ ಕೈಬೀಸಿ ಹುಮ್ಮಸ್ಸು ಹೆಚ್ಚಿಸಿದರು. ''ಇಂಡಿಯಾ.. ಇಂಡಿಯಾ.. ಇಂಡಿಯಾ... ವಿ ಲವ್ ಯು ಸಿರಾಜ್ ಭಾಯ್'' ಎಂದು ಘೋಷಣೆ ಕೂಗಿದರು. ಸಂಜೆ 7.30ಕ್ಕೆ ಆರಂಭಗೊಂಡ ವಿಜಯೋತ್ಸವ ಮೆರೆವಣಿಗೆ ಮೆಹದಿಪಟ್ಟಣಂ, ಮಸಾಬ್ಟ್ಯಾಂಕ್, ಖಾಜಮಾನ್ಷನ್, ನಶೆಮನ್ ಹೊಟೇಲ್ ಮೂಲಕ ಫಸ್ಟ್‌ಲ್ಯಾನ್ಸರ್‌ನಲ್ಲಿರುವ ಈದ್ಗಾ ಮೈದಾನದವರೆಗೆ ಸಾಗಿತು.
ಕೆರಿಬಿಯನ್ ದ್ವೀಪ ಬಾರ್ಬಡೊಸ್‌ನಲ್ಲಿ ಜೂನ್ 29ರಂದು ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ತಂಡ 17 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಜೂನ್ 5ರಂದು ಬೆಳಗ್ಗೆ ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡವು ತವರು ರಾಷ್ಟ್ರಕ್ಕೆ ಮರಳಿತ್ತು. ಅಂದು ಸಂಜೆ ಮುಂಬೈನ ಅರಬ್ಬಿ ಸಮುದ್ರ ತೀರದ ಮರೀನ್ ಡ್ರೈವ್ನಲ್ಲಿ ಲಕ್ಷಾಂತರ ಜನದ ಮಧ್ಯೆ ನೆಚ್ಚಿನ ಕ್ರಿಕೆಟಿಗರ ಮೆರವಣಿಗೆ ನಡೆಸಲಾಗಿತ್ತು. ಇದಾದ ಬಳಿಕ ಸಿರಾಜ್ ಹೈದರಾಬಾದ್ಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ಮುಂಬೈನಲ್ಲಿ ವಿಶ್ವಕಪ್ ವಿಜೇತ ಭಾರತಕ್ಕೆ 'ಅಭಿಮಾನಿ ಸಾಗರ'ದ ಸ್ವಾಗತ; ಕ್ರಿಕೆಟಿಗರ ಭವ್ಯ ಮೆರವಣಿಗೆ!