ಮೈಸೂರು: ಜಾರಿ ನಿರ್ದೇಶನಾಲಯ(ಇ.ಡಿ)ವೂ ಆರ್ಎಸ್ಎಸ್ ಮತ್ತು ಬಿಜೆಪಿಯ ಬಾಲಂಗೋಚಿಯಾಗಿದ್ದು, ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಇ.ಡಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಪತ್ನಿ ಪಡೆದ ಸೈಟ್ ಅನ್ನು ಈಗಾಗಲೇ ಮುಡಾಗೆ ವಾಪಸ್ ನೀಡಲಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ಹೆಸರು ಹೇಳೋದು ಸರಿಯೇ?. ಇ.ಡಿಗೆ ತಾಕತ್ತಿದ್ದರೆ ಜಪ್ತಿ ಮಾಡಿದ್ದೇವೆ ಅಂತ ಹೇಳುವ 142 ಸೈಟ್ ಪಟ್ಟಿ ಬಿಡುಗಡೆ ಮಾಡಲಿ. ಆದರೆ, ನಿವೇಶನ ಹಂಚಿಕೆ ಸಂಬಂಧ ಪತ್ರಿಕಾ ಹೇಳಿಕೆ ಕೊಡುವಂತಹ ದರ್ದು ಏನಿತ್ತು?. ವಿಚಾರಣೆ ಹಂತದಲ್ಲಿರುವಾಗಲೇ ಪತ್ರಿಕಾ ಪ್ರಕಟಣೆ ಕೊಡುವ ಅಗತ್ಯ ಇರಲಿಲ್ಲ. ಹೀಗಾಗಿ ಇದನ್ನು ಖಂಡಿಸಿ ಇ.ಡಿ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಇಡಿ ಜಪ್ತಿ ಮಾಡಿರುವ ಸೈಟ್ 168: ಜಪ್ತಿ ಮಾಡಿರುವ 168 ಸೈಟ್ಗಳಲ್ಲಿ ಸಿಎಂ ಪತ್ನಿ ಪಡೆದ 14 ಸೈಟ್ಗಳು ಇಲ್ಲ. ಅದನ್ನು ಈಗಾಗಲೇ ಅವರು ಮುಡಾಗೆ ವಾಪಸ್ ನೀಡಿದ್ದಾರೆ. 168 ಸೈಟ್ಗಳ ಪೈಕಿ 97 ಸೈಟ್ಗಳು ಬಿಜೆಪಿ - ಜೆಡಿಎಸ್ನವರಿಗೆ ಸೇರಿದ್ದಾಗಿವೆ. ಅದನ್ನು ಇ.ಡಿ ಅವರು ತನಿಖೆ ನಡೆಸಲಿ. ಇ.ಡಿ 14 ಸೈಟ್ಗಳ ಬೆಲೆ 56 ಕೋಟಿ ಎಂದು ಹೇಳುತ್ತದೆ. ಸಿಎಂ ಪ್ರಕರಣದಲ್ಲಿ ಇ.ಡಿ ಸುಳ್ಳು ಹೇಳುತ್ತಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಹಣ ಎಲ್ಲಿಂದ ಬಂತು?: ಸ್ನೇಹಮಯಿ ಕೃಷ್ಣ ಮುಡಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ಕೋರ್ಟ್ನಲ್ಲಿ ಹೋರಾಟ ಮಾಡಲು ಹಣ ಎಲ್ಲಿಂದ ಬರ್ತಿದೆ ಎಂದು ಹೇಳಬೇಕು. ನ್ಯಾಯಾಲಯದಲ್ಲಿ ವಕೀಲರು ಒಂದು ವಿಚಾರಣೆಗೆ 25 ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬರುತ್ತದೆ ಸ್ಪಲ್ಪ ಹೇಳಬೇಕು. ಸ್ನೇಹಮಯಿ ಕೃಷ್ಣ ಅವರ ಬೆನ್ನಿಗೆ ಯಾರಿದ್ದಾರೆ ಅನ್ನೋದು ಗೊತ್ತು. ಸದ್ಯದಲ್ಲೇ ಇವರ ಕರ್ಮಕಾಂಡ ಬಯಲಿಗೆ ತರುತ್ತೇವೆ. ಯಾರ ಬಳಿ ಹೋಗುತ್ತಾರೆ, ಎಲ್ಲಿಂದ ಹಣ ಬರುತ್ತಿದೆ ಎಂಬ ಮಾಹಿತಿ ನಮ್ಮ ಬಳಿಯಿದೆ. ಎಲ್ಲವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ನಾವು ಸ್ನೇಹಮಯಿ ಕೃಷ್ಣ ವಿರುದ್ಧ ಇ.ಡಿಗೆ ದೂರು ನೀಡಿದರೆ ಎಫ್ಐಆರ್ ದಾಖಲು ಮಾಡಲ್ಲ. ಅದೇ ಸ್ನೇಹಮಯಿ ಕೃಷ್ಣ ಮೇಲ್ ಮೂಲಕ ದೂರು ನೀಡಿದ್ರೆ ಸಂಜೆಗೆ ಎಫ್ಐಆರ್ ದಾಖಲು ಆಗುತ್ತದೆ. ಇದು ಇಡಿ ಇಲಾಖೆ ವ್ಯವಸ್ಥೆ ಎಂದು ಲಕ್ಷ್ಮಣ್ ಕಿಡಿಕಾರಿದರು.
ನಾರಾಯಣಸ್ವಾಮಿಗೆ ತಿರುಗೇಟು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣದ ಬಗ್ಗೆ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೀಡಿದ ಹೇಳಿಕೆಗೆ ಇದೇ ವೇಳೆ ಕಿಡಿಕಾರಿದ ಲಕ್ಷ್ಮಣ್, ಪ್ರಚಾರಕ್ಕಾಗಿ ಸಮ್ಮನೇ ಅರೋಪ ಮಾಡಬಾರದು. ಬಿಜೆಪಿ ಇವರನ್ನು ಪರಿಷತ್ ಪ್ರತಿಪಕ್ಷ ನಾಯಕರನ್ನಾಗಿ ಮಾಡಿರುವ ಉದ್ದೇಶ ಕಾಂಗ್ರೆಸ್ನ ದಲಿತ ನಾಯಕರ ವಿರುದ್ಧ ಮಾತನಾಡಲಿ ಅಂತ. ಅವರು ಮಹಿಳಾ ಮತ್ತು ಮಕ್ಕಳ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಘಾತವಾದ ಕಾರಿನಲ್ಲಿ ಲೋಡುಗಟ್ಟಲೇ ಹಣ ಸಾಗಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಷ್ಟು ಖಚಿತ ಮಾಹಿತಿ ಇದ್ದರೆ ಇ.ಡಿಗೆ ನೀವೇ ಮಾಹಿತಿ ನೀಡಿ. ಮಂಪರು ಪರೀಕ್ಷೆಯನ್ನು ನೀವೇ ಮಾಡಿಸಿಕೊಳ್ಳಿ ಎಂದರು.
ಇದನ್ನೂ ಓದಿ: ಇಡಿ ಮುಟ್ಟುಗೋಲು ಹಾಕಿಕೊಂಡಿರುವ ಸೈಟ್ಗಳಿಗೂ ನಮಗೂ ಸಂಬಂಧವಿಲ್ಲ : ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ - ED RAID ON MUDA SITE