'ಬಿಗ್ ಬಾಸ್' ಅನ್ನೋದೇ ಒಂದು ಎಮೋಷನ್. ಬಹು ಭಾಷೆಗಳಲ್ಲಿ ಪ್ರಸಾರ ಕಾಣುವ ಅತ್ಯಂತ ಜನಪ್ರಿಯ ಕಾರ್ಯಕ್ರಮವಿದು. ಹಿಂದಿ ಭಾಷೆಯ ಬಿಗ್ ಬಾಸ್ ಕಳೆದ ವಾರಾಂತ್ಯ ಪೂರ್ಣಗೊಂಡಿದೆ. ಈ ವಾರಾಂತ್ಯ ಕನ್ನಡ ಬಿಗ್ ಬಾಸ್ನ ಗ್ರ್ಯಾಂಡ್ ಫಿನಾಲೆ ಜರುಗಲಿದೆ. ಆರು ಮಂದಿ ಫಿನಾಲೆ ವಾರ ತಲುಪಿದ್ದು, ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿ ಮನೆ ಮಾಡಿದೆ.
ಬಿಗ್ ಬಾಸ್ ತನ್ನದೇ ಆದ ದೊಡ್ಡ ಫ್ಯಾನ್ ಬೇಸ್ ಹೊಂದಿದೆ. ಕನ್ನಡದ ಬಿಗ್ ಬಾಸ್ ಅನ್ನು ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಟ್ಟರೆ, ಹಿಂದಿ ಬಿಗ್ ಬಾಸ್ ಅನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಾರೆ. ಹಿಂದಿ ಆವೃತ್ತಿಯ 18ನೇ ಸೀಸನ್ನ ಗ್ರ್ಯಾಂಡ್ ಫಿನಾಲೆ ಜನವರಿ 19, ಭಾನುವಾರ ನಡೆಯಿತು. ಈ ವಾರಾಂತ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ವಿಜೇತರು ಯಾರೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.
ಹಿಂದಿ ಬಿಗ್ ಬಾಸ್ ವಿಜೇತರು: ಕರಣ್ ವೀರ್ ಮೆಹ್ರಾ ಬಿಗ್ ಬಾಸ್ ಹಿಂದಿ 18ರ ವಿಜೇತರಾಗಿ ಹೊರಹೊಮ್ಮಿದ್ರೆ, ವಿವಿಯನ್ ಡಿಸೆನಾ ರನ್ನರ್ ಅಪ್ ಆದ್ರು. ನಂತರದ ಸ್ಥಾನಗಳನ್ನು ಕ್ರಮವಾಗಿ ರಜತ್ ದಲಾಲ್, ಅವಿನಾಶ್ ಮಿಶ್ರಾ, ಚುಮ್ ದರಂಗ್ ಮತ್ತು ಈಶಾ ಸಿಂಗ್ ಪಡೆದುಕೊಂಡರು.
ಕನ್ನಡ ಬಿಗ್ ಬಾಸ್ ಫೈನಲಿಸ್ಟ್ಸ್:
- ಹನುಮಂತು.
- ಮೋಕ್ಷಿತಾ.
- ತ್ರಿವಿಕ್ರಮ್.
- ಮಂಜು.
- ಭವ್ಯಾ.
- ರಜತ್ ಕಿಶನ್.
ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ. ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್ನಲ್ಲಿ ಗೆದ್ದು, ಫಿನಾಲೆ ವಾರಕ್ಕೆ ಹೆಜ್ಜೆಯಿಟ್ಟ ಮೊದಲ ಸ್ಪರ್ಧಿ. ಮಾತು ಕಡಿಮೆ ಆದ್ರೂ, ಮಾತಿನಲ್ಲೊಂದು ತೂಕ ಇರುತ್ತೆ ಅನ್ನೋದು ನೋಡುಗರ ಅಭಿಪ್ರಾಯ. ಹಲವು ಬಾರಿ ನಿರೂಪಕ ಸುದೀಪ್ ಅವರ ಪ್ರಶಂಸೆಗೂ ಪಾತ್ರರಾಗಿ ಸದ್ದು ಮಾಡಿದ್ದಾರೆ. ಎಲ್ಲೂ ಮೋಸ ಮಾಡದೇ ಆಡುತ್ತಾ ಬಂದ ಇವರ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಧನರಾಜ್ ಆಚಾರ್ ಜೊತೆಗಿನ ನಿಷ್ಕಲ್ಮಶ ಸ್ನೇಹ ಈ ಬಿಗ್ ಬಾಸ್ ಪಯಣದಲ್ಲಿ ಸಖತ್ ಹೈಲೆಟ್ ಆಗಿದೆ ಅನ್ನಬಹುದು.
ಮೋಕ್ಷಿತಾ ಸೀಸನ್ 11ರ ಟಫೆಸ್ಟ್ ಕಂಟಸ್ಟೆಂಟ್. ಇಡೀ ಬಿಗ್ ಬಾಸ್ ಪಯಣದಲ್ಲಿ ಟಫ್ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಬಹಳ ಶಾಂತಸ್ವರೂಪಿಯಾಗಿ, ಹೆಚ್ಚಾಗಿ ಮಂಜು ಮತ್ತು ಗೌತಮಿ ಜೊತೆಯೇ ಕಾಣಿಸಿಕೊಂಡ ಇವರು ಕೆಲವೇ ವಾರಗಳಲ್ಲಿ ಏಕಾಂಗಿಯಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶುರು ಮಾಡಿದ್ರು. ಟಾಸ್ಕ್, ಮನರಂಜನೆ ಹೀಗೆ ಎಲ್ಲಾ ವಿಚಾರಗಳಲ್ಲೂ ಎತ್ತಿದ ಕೈ ಇವರದ್ದು. ಗೌತಮಿ ಮತ್ತು ಮಂಜು ಅವರ ಜೊತೆಗಿನ ಸ್ನೇಹ ಕನ್ನಡಿಗರ ಗಮನ ಸೆಳೆದಿದೆ. ಕೆಲವೇ ವಾರಗಳಲ್ಲಿ ಎಲಿಮಿನೇಷನ್ ಬಾಗಿಲಿನವರೆಗೂ ಹೋಗಿಬಂದ ಇವರು, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಮೂರು ಸ್ಪರ್ಧಿಗಳಲೊಬ್ಬರಾದರು. ಎಲಿಮಿನೇಷನ್ ಕದ ತಟ್ಟಿದ ಬೆನ್ನಲ್ಲೇ ತಮ್ಮ ಆಟದಲ್ಲಿ ತೀವ್ರ ಬದಲಾವಣೆ ಮಾಡಿಕೊಂಡರು. ಫ್ರೆಂಡ್ಶಿಪ್, ಕಂಫರ್ಟ್ ಝೋನ್ನಿಂದ ಹೊರಬಂದು ಏಕಾಂಗಿಯಾಗಿ ಹೋರಾಡಿದ ಇವರ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ತ್ರಿವಿಕ್ರಮ್ ಆರಂಭದಿಂದಲೂ ಟಫೆಸ್ಟ್ ಕಂಟಸ್ಟೆಂಟ್ ಎಂಬ ಕೀರ್ತಿಗೆ ಪಾತ್ರರಾದವರು. ಹೆಚ್ಚು ಮಾತನಾಡದೇ ಜನಪ್ರಿಯತೆ ಸಂಪಾದಿಸಿದವರು. ಆಟಕ್ಕೆ ನಿಂತ್ರೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟುತ್ತಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿವೆ. ಭವ್ಯಾ ಜೊತೆಗಿನ ಸ್ನೇಹ ಕೂಡಾ ವ್ಯಾಪಕವಾಗಿ ಗಮನ ಸೆಳೆದಿದೆ. ವಿಜೇತರು ಯಾರಾಗಬಹುದು ಎಂಬ ಊಹೆಯಲ್ಲಿ ತ್ರಿವಿಕ್ರಮ್ ಮತ್ತು ಹನುಮಂತು ಅವರ ಹೆಸರು ಹೆಚ್ಚಾಗಿ ಕೇಳಿ ಬಂದಿದೆ.
ಉಗ್ರಂ ಮಂಜು ಆರಂಭದಲ್ಲೇ ಅಬ್ಬರಿಸಿದ ಸ್ಪರ್ಧಿ. ಬಿಗ್ ಬಾಸ್ಗೆ ಬೇಕಾದ ಎಲ್ಲಾ ಗುಣಗಳು ಇವರಲ್ಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಗ್ರೇ ಏರಿಯಾ ಮಾಸ್ಟರ್, ಸ್ಟ್ರ್ಯಾಟಜಿ ಕಿಂಗ್ ಎಂದೇ ಪಾಪ್ಯುಲರ್ ಆದ್ರು. ಗೌತಮಿ ಮತ್ತು ಮೋಕ್ಷಿತಾ ಜೊತೆಗಿನ ಸ್ನೇಹ ವ್ಯಾಪಕವಾಗಿ ಗಮನ ಸೆಳೆದಿದೆ. ಆದರೆ ಬರುಬರುತ್ತಾ ಮಂಜು ಮಂಕಾಗಿದ್ದು ಮಾತ್ರ ಅಭಿಮಾನಿಗಳಲ್ಲಿ ಕೊಂಚ ಬೇಸರ ತರಿಸಿತ್ತು. ಸುದೀಪ್ ಕೂಡಾ ಈ ಬಗ್ಗೆ ಬುದ್ಧಿವಾದ ಹೇಳಿದ್ದರು. ಟಾಸ್ಕ್, ಎಂಟರ್ಟೈನ್ಮೆಂಟ್ನಲ್ಲಿ ತಮ್ಮ ಕೈಲಾದಷ್ಟು ಕೊಟ್ಟ ಮಂಜು ಟಾಪ್ ಸ್ಪರ್ಧಿ ಆಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
ಭವ್ಯಾ ತಮ್ಮ ಆಟ, ಆ್ಯಟಿಟ್ಯೂಡ್ನಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಟಾಸ್ಕ್ಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕೋ ಮೂಲಕ ಟಫೆಸ್ಟ್ ಕಂಟಸ್ಟೆಂಟ್ ಅಂತಾ ಗುರುತಿಸಿಕೊಂಡರು. ಕಳೆದ ಎರಡ್ಮೂರು ವಾರಗಳಲ್ಲಿ ಎಲಿಮಿನೇಟ್ ಆಗ್ತಾರಾ ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ ಅಂತಿಮವಾಗಿ ಫಿನಾಲೆ ವಾರ ತಲುಪೋ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.
ರಜತ್ ಕಿಶನ್ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿ ದೊಡ್ಡ ಮಟ್ಟಿಗೆ ಸದ್ದು ಮಾಡಿದವರು. ಇವರ ಆರ್ಭಟ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತಾದರೂ, ಟಫೆಸ್ಟ್ ಕಂಟಸ್ಟೆಂಟ್ ಎಂಬ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ತನ್ನ 50ನೇ ದಿನದಲ್ಲಿದ್ದ ಸಂದರ್ಭ ಶೋಭಾ ಶೆಟ್ಟಿ ಜೊತೆ ಮನೆ ಪ್ರವೇಶಿಸಿದ ರಜತ್ ಕಿಶನ್ ಟಾಸ್ಕ್ ಮತ್ತು ತಮ್ಮ ನೇರನುಡಿ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಏನೂ ಆಗಿಲ್ಲ ಎಂಬಂತೆ ನಡೆದು ಬಂದ ಪಟೌಡಿ ಕುಡಿ ಸೈಫ್; ಬೆನ್ನೊಳಗಿತ್ತು 2.5 ಇಂಚು ಉದ್ದದ ಚಾಕು
ಈ 6 ಮಂದಿ ಕೂಡಾ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇದೆ. ಇದೇ ಭಾನುವಾರ ರಾತ್ರಿ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರ ಹೆಸರು ಅಧಿಕೃತವಾಗಿ ಪ್ರಕಟವಾಗಲಿದೆ.